ಬೆಂ.,ನ, 14 : ಕರೋನಾ ಸಂದರ್ಭದಲ್ಲಿ ನಡೆದ ಅವ್ಯವಹಾರದ ಬಗ್ಗೆ ಸತ್ಯ ಶೋಧನೆಯಾಗಿದ್ದು, ನ್ಯಾ. ಮೈಕಲ್.ಡಿ.ಕುನ್ಹಾ ಅವರು ಸಲ್ಲಿಸಿರುವ ಮಧ್ಯಂತರ ವರದಿಯಲ್ಲಿ ದೊರೆತಿರುವ ಮಾಹಿತಿ, ದಾಖಲೆಗಳನ್ನು ಆಧರಿಸಿ ಸಮಗ್ರ ತನಿಖೆಗಾಗಿ ರಾಜ್ಯ ಸರ್ಕಾರ ಎಸ್.ಐ.ಟಿ ಯನ್ನು ರಚಿಸಬೇಕು ಎಂದು ಸಚಿವ ಸಂಪುಟ ತೀರ್ಮಾನಿಸಿದೆ. ಕೋವಿಡ್ ಅವ್ಯವಹಾರ ಕ್ರಮಗಳಲ್ಲಿ ಅಪರಾಧಿ ಅಂಶಗಳನ್ನು ತನಿಖೆ ಮಾಡಿ ಎಫ್.ಐ.ಆರ್, ದೋಷಾರೋಪ ಪಟ್ಟಿ ಮತ್ತು ಅಪರಾಧಿಗಳನ್ನು ಪತ್ತೆ ಹಚ್ಚಲು ಮತ್ತು ಸೂಕ್ತ ಶಿಕ್ಷೆಗೆ ಅಭಿಯೋಜನೆಗೆ ಒಳಪಡಿಸುವ ಮೂಲಕ ಕರ್ನಾಟಕದ ಜನತೆಗೆ ನ್ಯಾಯ ಒದಗಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಇಂದು ಸಚಿವ ಸಂಪುಟ ಸಭೆಯ ನಂತರ ಪ್ರತಿಕಾಗೋಷ್ಠಿಯಲ್ಲಿ ತಿಳಿಸಿದರು. ಶೀಘ್ರದಲ್ಲಿಯೇ ಎಸ್.ಐ.ಟಿ ಅಧಿಕಾರಿಗಳ ನೇಮಕದ ಕುರಿತು ಮುಖ್ಯಮಂತ್ರಿಗಳು ತೀರ್ಮಾನಿಸಲಿದ್ದಾರೆ ಎಂದರು. ಅಗತ್ಯವಿದ್ದಲ್ಲಿ ಎಫ್.ಐ.ಆರ್ ಹಾಕಿ ತನಿಖೆ ಕೈಗೊಳ್ಳಬಹುದು ಎಂದರು. ಆಯೋಗದ ಮುಂದುವರೆದ ಕ್ರಮವಾಗಿ ಎಸ್.ಐ.ಟಿ ರಚಿಸಲಾಗುವುದು ಎಂದರು. ಕೋವಿಡ್ 19 ಸಂದರ್ಭದಲ್ಲಿ ಅಂದಿನ ಸರ್ಕಾರ ಅತ್ಯಂತ ಅಮಾನವೀಯವಾಗಿ ಜನರ ರಕ್ಷಣೆ ಮಾಡಬೇಕಾದ ಸಂದರ್ಭದಲ್ಲಿ ಭ್ರಷ್ಟಾಚಾರ, ಬೇಜವಾಬ್ದಾರಿತನ, ಜನರಿಗೆ ಮೋಸ, ಮಾಹಿತಿ/ವಿಷಯಗಳನ್ನು ಜನರಿಂದ ಮುಚ್ಚಿಡುವುದು, ಕಾಗದಗಳನ್ನು ಸಿಗದ ಹಾಗೇ ಮಾಡುವುದು ಮಾತ್ರವಲ್ಲದೇ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಕಾರ್ಯನಿರ್ವಹಣೆಯನ್ನು ನಿರ್ಬಂಧಿಸಿ ಭ್ರಷ್ಟಾಚಾರವನ್ನು ಯಾರ ಗಮನಕ್ಕೂ ಬಾರದಂತೆ ಮಾಡುವ ದೊಡ್ಡ ಪ್ರಯತ್ನವಾಗಿತ್ತು. ಶಾಸನಬದ್ಧ ಸಮಿತಿಗಳ ಕಾರ್ಯನಿರ್ವಹಣೆಯನ್ನು ಅಸಾಧ್ಯವೆನ್ನುವ ರೀತಿಯ ವಾತಾವರಣ ನಿರ್ಮಾಣ ಮಾಡಲಾಯಿತು. 330 ರೂ.ಗಳಿಗೆ ಲಭ್ಯವಿದ್ದ ಪಿಪಿಇ ಕಿಟ್ 2117 ರೂಪಾಯಿಗೆ ಲಕ್ಷಾಂತರ ಕಿಟ್ ಗಳನ್ನು ಹೊರ ದೇಶದಿಂದ ತರಿಸಲಾಗಿದೆ. ಸಮಯ ಮೀರಿದ ಔಷಧಿಗಳನ್ನು ಖರೀದಿಸುವುದು, ಔಷಧಿಗಳನ್ನು ಮೂರು ಪಟ್ಟು ಹೆಚ್ಚು ಬೆಲೆಗೆ ಕೊಳ್ಳುವುದು, ಕಪ್ಪುಪಟ್ಟಿಗೆ ಸೇರಿದ ಕಂಪನಿಗಳಿಂದ ವ್ಯವಹಾರ, ಕೆಲವು ಸಂದರ್ಭದಲ್ಲಿ ದೇಣಿಗೆ ನೀಡಿದಂತೆ ಹೇಳಿ ಅದರ ಮೇಲೆ ಹಣ ಪಾವತಿ ಮಾಡಿರುವ ಕೆಲಸಗಳಾಗಿವೆ ಎಂದರು. *ಆರು ಪ್ರಕರಣಗಳನ್ನು ಕೈಗೆತ್ತಿಕೊಳ್ಳಲು ಸಿಬಿಐ ನಿರಾಕರಣೆ: ತನಿಖೆಗೆ ತೀರ್ಮಾನ* ಸಿ.ಬಿ.ಐ ತನಿಖೆಗೆ ವಹಿಸಿದ 09 ಅಕ್ರಮ ಗಣಿಗಾರಿಕೆ ಪ್ರಕರಣಗಳಲ್ಲಿ 06 ಪ್ರಕರಣಗಳಲ್ಲಿ ತನ್ನಿಂದ ತನಿಖೆ ಸಾಧ್ಯವಿಲ್ಲವೆಂದು ಸಿ.ಬಿ.ಐ ತಿಳಿದೆ. ಈ 06 ಪ್ರಕರಣಗಳನ್ನು ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡಕ್ಕೆ ವಹಿಸಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಸಚಿವ ಎಚ್.ಕೆ ಪಾಟೀಲ ತಿಳಿಸಿದರು. ಗೋವಾದ ಮರ್ಮಗೋವಾ ಮತ್ತು ಪಣಜಿ, ತಮಿಳುನಾಡಿನ ಎನ್ನೋರ್ ಮತ್ತು ಚೆನ್ನೈ, ಕರ್ನಾಟಕದ ನವ ಮಂಗಳೂರು ಮತ್ತು ಕಾರವಾರ ಬಂದರುಗಳಲ್ಲಿ ಹಾಗೂ ಆಂಧ್ರ ಪ್ರದೇಶದ ಕೃಷ್ಣ ಪಟ್ಟಣಂ, ಕಾಕಿನಾಡ ಮತ್ತು ವಿಶಾಖಪಟ್ಟಣಂ ಬಂದರುಗಳಲ್ಲಿ ಅಕ್ರಮ ಅದಿರು ಸಾಗಾಣಿಕೆ ಪ್ರಕರಣಗಳನ್ನು ಸಿ.ಬಿ.ಐ ವಾಪಸ್ಸು ಕಳುಹಿಸಿರುವ ಹಿನ್ನೆಲೆಯಲ್ಲಿ ಆ ಪ್ರಕರಣಗಳ ಬಗ್ಗೆ ವಿಶೇಷ ತನಿಖಾ ತಂಡದಿಂದ ತನಿಖೆ ಮಾಡಿಸಲು ನಿರ್ಣಯಿಸಲಾಗಿದೆ ಎಂದರು. ನ್ಯಾಯಾಲಯ ಅಥವಾ ತನಿಖಾ ಸಂಸ್ಥೆಗಳಿಂದ ವಶಪಡಿಸಿಕೊಳ್ಳಲಾಗಿದ್ದ 5-6 ಪ್ರಕರಣಗಳನ್ನು ತನಿಖೆ ಮಾಡಲು ಸೂಕ್ತ ಕ್ರಮ ವಹಿಸಬೇಕು. ಬೇಲೇಕೇರಿ ರೀತಿಯಲ್ಲಿಯೇ ಮದ್ರಾಸ್ ಬಂದರಿನಲ್ಲಿ ಇದ್ದ ಅದಿರನ್ನು ಕದ್ದು ರಫ್ತು ಮಾಡಲಾಗಿದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ತರಿಸಿ ಮುಂದಿನ ಹೆಜ್ಜೆ ಇಡಲು ಸಚಿವ ಸಂಪುಟದಲ್ಲಿ ಚರ್ಚೆ ಮಾಡಲಾಯಿತು. ಈ ಬಗ್ಗೆ ವಿವರಗಳನ್ನು ಮುಂದಿನ ಸಚಿವ ಸಂಪುಟ ಸಭೆಗೆ ಸಲ್ಲಿಸಲು ಮುಖ್ಯಮಂತ್ರಿಗಳು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ ಎಂದು ಸಚಿವರು ತಿಳಿಸಿದರು. *ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ಅಕ್ರಮ ಗಣಿಗಾರಿಕೆ* ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡಿದ ʼಸಿʼ ವರ್ಗದ 10 ಗಣಿ ಗುತ್ತಿಗೆದಾರರ ಪ್ರಕರಣಗಳನ್ನು ಸಹ ಈಗಿನ ಎಸ್.ಐ.ಟಿ ತನಿಖೆಗೆ ವಹಿಸಲು ನಿರ್ಣಯಿಸಲಾಗಿದೆ ಎಂದು ಸಚಿವರು ವಿವರಿಸಿದರು. ಮೆ|| ಮೈಸೂರು ಮ್ಯಾಂಗನೀಸ್ ಕಂಪನಿ, ಮೆ|| ಎಂ.ದಶರಥ ರಾಮಿ ರೆಡ್ಡಿ, ಮೆ|| ಅಲ್ಲಂ ವೀರಭದ್ರಪ್ಪ, ಮೆ|| ಕರ್ನಾಟಕ ಲಿಂಪೊ, ಮೆ|| ಅಂಜನಾ ಮಿನರಲ್ಸ್, ಮೆ|| ರಾಜೀಯ ಖಾನುಂ, ಮೆ|| ಮಿಲನ ಮಿನರಲ್ಸ್ (ಮಹಾಲಕ್ಷಿ & ಕಂ), ಮೆ|| ಎಂ.ಶ್ರೀನಿವಾಸುಲು, ಮೆ|| ಚನ್ನಕೇಶವ ರೆಡ್ಡಿ (ಲಕ್ಷ್ಮೀನರಸಿಂಹ ಮೈನಿಂಗ್ ಕಂಪನಿ ಮತ್ತು ಮೆ|| ಜಿ.ರಾಯಶೇಖರ್ ಕಂಪನಿಗಳು ಅಕ್ರಮ ಗಣಿಗಾರಿಕೆಗಳು ಮಂಜೂರಾದ ಗುತ್ತಿಗೆ ಪ್ರದೇಶದ ಹೊರಗೆ ಶೇ.10 ಕ್ಕಿಂತ ಹೆಚ್ಚು ಗಣಿಗಾರಿಕೆ ಹೊಂಡಗಳು ಮತ್ತು ಮಂಜೂರಾದ ಗುತ್ತಿಗೆಗಿಂತ ಹೆಚ್ಚು ಎಂದು ಕಂಡುಬಂದಿರುವ ಹಿನ್ನೆಲೆಯಲ್ಲಿ ಮತ್ತು ಅರಣ್ಯ ಸಂರಕ್ಷಣೆ ಕಾಯ್ದೆಯ ಉಲ್ಲಂಘನೆಯಲ್ಲಿ ತೊಡಗಿರುವ ಗುತ್ತಿಗೆಗಳು ಮತ್ತು ಇತರೆ ಗುತ್ತಿಗೆ ಪ್ರದೇಶಗಳಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ಭಾಗಿಯಾಗಿರುವುದನ್ನು ಒಳಗೊಂಡಿರುತ್ತದೆ. ಆದ್ದರಿಂದ ಈ ಮೇಲ್ಕಂಡ ಕಂಪನಿಗಳ ಗಣಿ ಗುತ್ತಿಗೆಗಳ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸುವ ಸಂಬಂಧ ಲೋಕಾಯುಕ್ತದ ವಿಶೇಷ ತನಿಖಾ ದಳಕ್ಕೆ ವಹಿಸಲು ಸಚಿವ ಸಂಪುಟ ತೀರ್ಮಾನಿಸಿದೆ ಎಂದು ಸಚಿವರು ವಿವರಿಸಿದರು. *ಇತರೆ ನಿರ್ಣಯಗಳು* · ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ರಾಜ್ಯ ವಿಧಾನ ಪರಿಷತ್ ನಲ್ಲಿ ಖಾಲಿಯಾಗಿರುವ ಎರಡು ಸ್ಥಾನಗಳಿಗೆ ಸದಸ್ಯರನ್ನು ರಾಜ್ಯಪಾಲರಿಂದ ನಾಮನಿರ್ದೇಶನ ಮಾಡಲು ಮುಖ್ಯಮಂತ್ರಿಗಳಿಗೆ ಶಿಫಾರಸ್ಸು ಮಾಡಲು ಅಧಿಕಾರ ನೀಡಲಾಯಿತು. · ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಬೆಂಗಳೂರಿನ ಹೆಬ್ಬಾಳದಲ್ಲಿ "ಸಾವಯವ ಮತ್ತು ಸಿರಿಧಾನ್ಯ ಹಬ್ಬನ್ನು ರೂ. 20.00 ಕೋಟಿಗಳ ಮೊತ್ತದಲ್ಲಿ (ಕೇಂದ್ರ – ರೂ. 12.00 ಕೋಟಿಗಳು. ರಾಜ್ಯ - ರೂ. 8.00 ಕೋಟಿಗಳು) ಸ್ಥಾಪಿಸಲು ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಧರಿಸಿದೆ. · ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಯಡಿ ರಾಮನಗರ ಜಿಲ್ಲೆ, ಚನ್ನಪಟ್ಟಣ ಸರ್ಕಾರಿ ರೇಷ್ಮೆ ತರಬೇತಿ ಸಂಸ್ಥೆಯ ಆವರಣದಲ್ಲಿ ಹೈ-ಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆ ನಿರ್ಮಾಣ ಹಂತ-2ರ ಕಾಮಗಾರಿಯನ್ನು ರೂ. 125.00 ಕೋಟಿಗಳ ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. · ವೈದ್ಯಕೀಯ ಶಿಕ್ಷಣ ಇಲಾಖೆಯಡಿ ರಾಷ್ಟ್ರೀಯ ಆರೋಗ್ಯ ಅಭಿಯಾನದ PM- ABHIM ಯೋಜನೆಯಡಿ ರಾಜ್ಯದ 07 ವೈದ್ಯಕೀಯ ಕಾಲೇಜುಗಳಲ್ಲಿ 50 ಹಾಸಿಗೆಗಳ ಸಾಮರ್ಥ್ಯದ ಒಟ್ಟು 07 Critical Care Blockಗಳ ನಿರ್ಮಾಣದ ರೂ. 148.20 ಕೋಟಿಗಳ ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯ ಕೈಗೊಂಡಿದೆ. · ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ 69919 ಅಂಗನವಾಡಿ ಕೇಂದ್ರಗಳಿಗೆ ಪ್ರತಿ ಕೇಂದ್ರಕ್ಕೆ ರೂ. 3000/- ಘಟಕ ವೆಚ್ಚದಂತೆ 2024-25ನೇ ಸಾಲಿನಲ್ಲಿ ಶಾಲಾ ಪೂರ್ವ ಶಿಕ್ಷಣ ಕಿಟ್‌ಗಳನ್ನು ರೂ. 20.98 ಕೋಟಿಗಳ ಮೊತದಲ್ಲಿ ಖರೀದಿಸಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. · ಪ್ರಧಾನಮಂತ್ರಿ ಆವಾಸ್ ಯೋಜನೆ (ನಗರ) 2.0 ಯೋಜನೆಯನ್ನು ಅನುಷ್ಠಾನಗೊಳಿಸುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ಈ ಯೋಜನೆಗೆ ಕೇಂದ್ರದ ಅನುದಾನದ ಬಗ್ಗೆ ಮುಖ್ಯಮಂತ್ರಿಗಳು ವಿಸ್ತೃತವಾದ ಪತ್ರವನ್ನು ಮಾನ್ಯ ಪ್ರಧಾನಮಂತ್ರಿಗಳಿಗೆ ಬರೆಯುವ ಬಗ್ಗೆ ಸಚಿವ ಸಂಪುಟ ತೀರ್ಮಾನಿಸಿತು. · ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ-ಕರ್ನಾಟಕ ಜಾಗತಿಕ ಸಾಮರ್ಥ್ಯ ಕೇಂದ್ರಗಳ (GCC) ನೀಡುವ ಬಗ್ಗೆ 3 2024-25ಕ್ಕೆ ಅನುಮೋದನೆ ನೀಡಲಾಗಿದೆ. · ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಲ್ಲಿ ಉತ್ಕೃಷ್ಟತಾ ಕೇಂದ್ರವನ್ನು ರೂ. 28.00 ಕೋಟೆಗಳ ಅಂದಾಜು ಮೊತ್ತದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ. · ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಸಕ್ಷಮ್ ಯೋಜನೆಯಡಿ ರಾಜ್ಯದ ಅಂಗನವಾಡಿ ಕೇಂದ್ರಗಳಿಗೆ ಎಲ್‌ಇಡಿ ಮತ್ತು ಮತ್ತು ಇತರೆ ಸೌಲಭ್ಯಗಳನ್ನು ರೂ. 174.75 ಕೋಟಿಗಳ ಮೊತ್ತದಲ್ಲಿ ಒದಗಿಸಲು ಆಡಳಿತಾತ್ಮಕ ಅನುಮೋದನೆ ಸಚಿವ ಸಂಪುಟ ನೀಡಿದೆ.
© ASK News Kannada. All Rights Reserved. Designed by AGScurate IT Solutions LLP