ಭಾರತದ ಹೆಮ್ಮೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಮಂದಿರ ಅಯೋಧ್ಯೆ ಶ್ರೀರಾಮ ಜನ್ಮ ಭೂಮಿಯಲ್ಲಿ ನಿರ್ಮಿಸಿ ಲೋಕಾರ್ಪಣೆಯಾಗಿದ್ದು 500 ವರ್ಷಗಳ ಕನಸು ನನಸದಾಂತೆ ಭಾರತದ ಮತ್ತೊಬ್ಬ ಹೆಮ್ಮೆಯ ಮಹಾ ಪುರುಷ, ವಿಶ್ವಕ್ಕೆ ಮಾದರಿ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರ ಮಂದಿರ ನಿರ್ಮಿಸಬೇಕೆಂದು ಸಾಮಾಜಿಕ ಚಿಂತಕ, ಸಮಾನತಾವಾದಿ ಅನೀಲ ಮೆಣಸಿನಕಾಯಿ ಅಭಿಮಾನಿ ಬಳಗವು ರಾಮ ಮಂದಿರ ಆಯ್ತು ಭೀಮ ಮಂದಿರ ಬೇಕೆಂದು ಅಭಿಯಾನ ಶುರು ಮಾಡಿದೆ. ಅಂದು ದೇಶದಲ್ಲಿದ್ದ ಅನಿಷ್ಟ ಪದ್ಧತಿಗಳಲ್ಲೊಂದಾದ ಅಸ್ಪೃಶ್ಯತೆಯನ್ನು ತೊಡೆದು ಹಾಕುವ ನಿಟ್ಟಿನಲ್ಲಿ 1930ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಬಿ.ಕೆ.ಗಾಯಕವಾಡ್ ಅವರ ನೇತೃತ್ವದಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಅಂಬೇಡ್ಕರ್ ಹೀಗೆ ಹೇಳಿದ್ದರಂತೆ ರಾಮ ತನ್ನ ನಡುವಳಿಕೆ, ಸಭ್ಯತೆಯಿಂದ ದೊಡ್ಡವನಾದ. ಶಬರಿ ಕೊಟ್ಟ ಎಂಜಲು ಹಣ್ಣನ್ನು ಪ್ರಸಾದವೆಂದು ಸ್ವೀಕರಿಸಿದ. ಆದರೆ, ರಾಮನನ್ನು ಆರಾಧಿಸುವವರು ರಾಮನ ನಡವಳಿಕೆ ಮತ್ತು ಸಭ್ಯತೆಯನ್ನು ಮರೆಯುತ್ತಾರೆ. ಈ ಮಾನಸಿಕತೆಯ ಪರಿವರ್ತನೆಯೇ ಕಾಳರಾಮ ಮಂದಿರ ಪ್ರವೇಶದ ಗುರಿ ಎಂದಿದ್ದರಂತೆ. ಆದರೆ, ಅಯೋಧ್ಯೆಯ ಅದೇ ರಾಮಮಂದಿರ ನಿರ್ಮಾಣಕ್ಕೆ ದಲಿತ ನಾಯಕ ಕಾಮೇಶ್ವರ ಚೌಪಾಲ್ ಶಿಲಾನ್ಯಾಸ ನೆರವೇರಿಸಿರುವುದು ಇತಿಹಾಸ. ಅಂದು ಸಾವಿರಾರು ಸಂಖ್ಯೆಯಲ್ಲಿ ಅಸ್ಪೃಶ್ಯರು ಕಾಳರಾಮ ಮಂದಿರ ಪ್ರವೇಶ ಮಾಡಿದರೂ, ಇಂದಿಗೂ ಅಸ್ಪೃಶ್ಯತೆ ಎಂಬುವುದು ಜೀವಂತವಾಗಿದೆ. ಇದನ್ನೆಲ್ಲಾ ಗಮನವಾಗಿಟ್ಟುಕೊಂಡು, ಬಸವಣ್ಣನವರ ಸಮಾನತೆಯ ತತ್ವವನ್ನು ಪ್ರೇರಣೆಯಾಗಿಸಿಕೊಂಡು ದೇಶದ ಪ್ರತಿಯೊಬ್ಬ ಪ್ರಜೆ ಗೌರವಯುತವಾಗಿ ಸಮಾಜದಲ್ಲಿ ಸಮಾನತೆಯಿಂದ ಬದುಕಬೇಕೆಂಬ ನಿಟ್ಟಿನಲ್ಲಿ ಸಮಾನತೆ, ವ್ಯಕ್ತಿ ಸ್ವಾತಂತ್ರ್ಯ, ಬ್ರಾತೃತ್ವ, ಜಾತ್ಯಾತೀತ ತತ್ವಗಳ ಮೂಲಭೂತ ಆಶಯಗಳನ್ನು ಹೊಂದಿರುವ ಶ್ರೇಷ್ಠ ಸಂವಿಧಾನ ನೀಡಿದ ಕೀರ್ತಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ. ಅಂದಿನಿಂದ ಇಂದಿನವರೆಗೂ ಜಾತಿ ವ್ಯವಸ್ಥೆ, ಅಸ್ಪೃಶ್ಯತೆಯ ವಿರುದ್ಧದ ಹೋರಾಟಗಳು, ಸಮಾನತೆಯ ಕೂಗು ಕೇಳಿ ಬರುತ್ತಿರುವ ನಡುವೆಯೂ ತ್ರೇತಾಯುಗದ ಶ್ರೀರಾಮನ ಮಂದಿರ ನಿರ್ಮಾಣಕ್ಕಾಗಿ ನಡೆದ ಐದು ಶತಮಾನದ ಹಿಂದೂಗಳ ಹೋರಾಟ ತಾರ್ಕಿಕ ಅಂತ್ಯ ಕಂಡಿದೆ. ಬಯಸಿದಂತೆ ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಿಸಿ ಬಾಲರಾಮನನ್ನು ಪ್ರತಿಷ್ಠಾಪಿಸಲಾಗಿದೆ. ಹೀಗಾಗಿ ಜಗತ್ತಿನಾದ್ಯಂತ ರಾಮನಾಮ ಜಪವೇ ಕೇಳಿಬರುತ್ತಿದೆ. ಅನೇಕರು ಸಂತಸ ವ್ಯಕ್ತಪಡಿಸುತ್ತಿದ್ದು, ನಾನು ಹರ್ಷಿತನಾಗಿದ್ದೇನೆ. ಅಲ್ಲದೇ, ಕೋಟ್ಯಂತರ ಹಿಂದೂಗಳ ಶತಮಾನಗಳ ಕನಸು ನನಸು ಮಾಡಿದ್ದು ಇದೇ ಭೀಮನ ಸಂವಿಧಾನ ಎನ್ನುವುದು ನಮ್ಮೆಲ್ಲರ ಹೆಮ್ಮೆ. ಹೀಗಾಗಿ, ಶ್ರೀರಾಮನ ಜೀವನ ಸಂದೇಶ ಸಾರುವ ಅಯೋಧ್ಯೆ ರಾಮ ಮಂದಿರದಂತೆ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಜೀವನ ಸಂದೇಶವನ್ನು ಜಗತ್ತಿಗೆ ಇನ್ನಷ್ಟು ಪಸರಿಸುವ ಮಂದಿರವೊಂದು ನಿರ್ಮಾಣವಾಗಬೇಕಾದ ಅಗತ್ಯವಿದೆ. ಭಾರತ ದೇಶದ ಸಂಪೂರ್ಣ ವಿಮೋಚನೆಗಾಗಿ ದುಡಿದು, ದೇಶಕ್ಕೆ ಸ್ಮರಣೀಯ ಕೊಡುಗೆ ನೀಡಿದ ವೈಚಾರಿಕ ನಾಯಕ ಡಾ.ಅಂಬೇಡ್ಕರ್ ಅವರು ಬದುಕಿದ್ದಾಗ ಅತ್ಯಂತ ಅಮಾನುಷವಾಗಿ ನಡೆಸಿಕೊಂಡ ಕಾಂಗ್ರೆಸ್ ಅಂಬೇಡ್ಕರ್ ಅವರ ಹೆಸರನ್ನು ಸದಾ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ. ಇದು ಈಗಲೂ ಮುಂದುವರಿದಿದೆ. ಆದರೆ, 2014ರಿಂದ ಈಚೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕ ಅಂಬೇಡ್ಕರ್ ಅವರಿಗೆ ಸಂಬಂಧಿಸಿದ ಜನ್ಮಭೂಮಿ, ಶಿಕ್ಷಾ ಭೂಮಿ, ದೀಕ್ಷಾ ಭೂಮಿ, ಮಹಾಪರಿನಿರ್ವಾಣ ಭೂಮಿ ಹಾಗೂ ಚೈತ್ಯಭೂಮಿ ಈ ಐದು ಸ್ಥಳಗಳು ಯಾತ್ರಾ ಸ್ಥಳಗಳಾಗಿ ಮಾರ್ಪಾಡಾಗುತ್ತಿವೆ. ಅಂಬೇಡ್ಕರ್ ಅವರ ಗೌರವಾರ್ಥವಾಗಿ ಈ ಐದು ಸ್ಥಳಗಳನ್ನು ಪಂಚತೀರ್ಥ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಹೀಗಾಗಿ ದೇಶದ 30 ಕೋಟಿಗೂ ಅಧಿಕ ಜನಸಂಖ್ಯೆಯುಳ್ಳ ಪರಿಶಿಷ್ಟ ಜಾತಿಯ ಜನರಿಗೆ ನಂಬಿಕೆ ಇದೆ. ಶೀಘ್ರದಲ್ಲೇ ಅಯೋಧ್ಯೆಯ ರಾಮಮಂದಿರದಂತೆ ಪ್ರಧಾನಿ ನರೇಂದ್ರ ಮೋದಿಯವರು ಮುಂಬೈನ ಚೈತ್ಯಭೂಮಿಯಲ್ಲಿ ಭೀಮ ಮಂದಿರ ನಿರ್ಮಾಣ ಮಾಡುವರೆಂದು. ಹಾಗಾಗಿ ಅಂತಹ ಸಂತೋಷದ ಘಳಿಗೆ ಶೀಘ್ರವೇ ಒದಗಿಬರಲೆಂದು ಆಶಿಸುತ್ತೇನೆ. ಅದರಂತೆ, ದೇಶ ಗಣರಾಜ್ಯವಾಗಿ ಅಮೃತ ಮಹೋತ್ಸವ ಆಚರಿಸಿಕೊಳ್ಳುವ ಹೊಸ್ತಿಲಲ್ಲಿದ್ದರೂ, ಅಂಬೇಡ್ಕರ್ ಅವರನ್ನು ಪರಿಪೂರ್ಣವಾಗಿ ತಿಳಿದುಕೊಳ್ಳುವ, ತಿಳಿಸಿಕೊಡುವ ಕಾರ್ಯವಾಗಿಲ್ಲ. ಜೊತೆಗೆ ಅವರನ್ನು ಕೇವಲ ಒಂದು ಜನಾಂಗೀಯ ವ್ಯಕ್ತಿಯನ್ನಾಗಿ ಕಾಣಲಾಗುತ್ತಿರುವುದು ಗುಟ್ಟಾಗೇನು ಉಳಿದಿಲ್ಲ. ಹೀಗಾಗಿ, ರಾಮನಾಮದಂತೆ ಭೀಮನಾಮವೂ ಪ್ರತಿಧ್ವನಿಸಬೇಕೆಂದರೆ ಭೀಮಮಂದಿರ ನಿರ್ಮಾಣವಾಗಬೇಕಿದೆ. ಅಂಬೇಡ್ಕರ್ ಅವರ ಸಮಾಧಿ ಸ್ಥಳವಾಗಿರುವ ಮುಂಬೈನ ಚೈತ್ಯ ಭೂಮಿ ಪವಿತ್ರ ಸ್ಥಳವನ್ನಾಗಿಸಬೇಕಾದ ಹೊಣೆಗಾರಿಕೆ ದೇಶದ ಪ್ರತಿಯೊಬ್ಬ ಪ್ರಜೆಯದ್ದಾಗಿದೆ. ಹಾಗಾಗಿ ಅಂಬೇಡ್ಕರ್ ಅನುಯಾಯಿಗಳು, ಬಸವಣ್ಣನ ಅನುಯಾಯಿಗಳು, ಬುದ್ಧನ ಅನುಯಾಯಿಗಳು ಸೇರಿದಂತೆ ದೇಶವಾಸಿಗಳೆಲ್ಲರೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಿದಂತೆ, ಮಹಾರಾಷ್ಟ್ರದ ದಾದರ್ ನಲ್ಲಿ ಭೀಮ ಮಂದಿರವನ್ನು ಸ್ಥಾಪಿಸುವಂತೆ ಸರ್ಕಾರಗಳಿಗೆ ಹಕ್ಕೊತ್ತಾಯ ಮಾಡೋಣ. ರಾಮಮಂದಿರಕ್ಕಾಗಿ ನಡೆಸಿದ ಆಂದೋಲನದಂತೆ, ಭೀಮಮಂದಿರಕ್ಕಾಗಿ ನಡೆಸೋಣ. ಭೀಮ ಮಂದಿರ ಅಭಿಯಾನಕ್ಕೆ ಸರ್ವರ ಸಹಕಾರ ಅಗತ್ಯವಾಗಿದ್ದು ನಮ್ಮ ಹೋರಾಟಕ್ಕೆ ನೀವು ಕೈ ಜೋಡಿಸಿದರೆ ಭೀಮ ಬಲ ಸಿಗಲಿದೆ. *ಬನ್ನಿ ಭೀಮ ಮಂದಿರ ಕಟ್ಟೋಣ ಸಂವಿಧಾನದ ಆಶಯ ಉಳಿಸಿ ಬೆಳೆಸಿ ಭೀಮನನ್ನು ಸದಾ ಆರಾಧಿಸೋಣ...* *ಜೈ ಶ್ರೀರಾಮ...ಜೈ ಶ್ರೀಭೀಮ ಎನ್ನೋಣ...* - *ಅನೀಲ್ ಪಿ.ಮೆಣಸಿನಕಾಯಿ*
© ASK News Kannada. All Rights Reserved. Designed by AGScurate IT Solutions LLP