ಉತ್ತರ ಕರ್ನಾಟಕ ಬಿಜೆಪಿ ನಾಯಕರನ್ನು ಟಾರ್ಗೆಟ್ ಮಾಡಿರುವ ಕಾಂಗ್ರೆಸ್ ಈಗ ಮತ್ತೊಬ್ಬ ಬಿಜೆಪಿ ನಾಯಕನನ್ನು ಸೆಳೆದುಕೊಳ್ಳಲು ಜಾತಿ ಬಲೆ ಬಿಸಿದ್ದು ತೀವ್ರ ಕುತೂಹಲದ ಚರ್ಚೆ ಶುರುವಾಗಿದೆ. ಬಿಎಸ್ಆರ್ ಕಾಂಗ್ರೆಸ್ ಪಕ್ಷದಿಂದ 1 ಭಾರಿ, ಬಿಜೆಪಿ ಪಕ್ಷದಿಂದ 2 ಭಾರಿ ಸೇರಿ 3 ಭಾರಿ ಗದಗ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡರು ರಾಜ್ಯ ರಾಜಕೀಯದಲ್ಲಿ ಗಮನ ಸೆಳೆದಿರುವ ಆಕರ್ಷಕ ನಾಯಕತ್ವದ ಬಿಜೆಪಿ ನಾಯಕ ಅನೀಲ ಪಿ.ಮೆಣಸಿನಕಾಯಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆದುಕೊಳ್ಳಲು ತೀವ್ರ ಪ್ರಯತ್ನ ನಡೆದಿದ್ದು ಕೈ, ಕಮಲದಲ್ಲಿ ಗುಸು ಗುಸು ಮಾತು ಜೋರಾಗಿದೆ. ರಾಜ್ಯದ ಪ್ರಮುಖ ನಾಯಕರಾದ ಕಾಂಗ್ರೆಸ್ ಪಕ್ಷದ ಎಚ್ಕೆ ಪಾಟೀಲರ ವಿರುದ್ಧ ಸ್ಪರ್ಧಿಸಿ 2018ರ ವಿಧಾನ ಸಭಾ ಚುನಾವಣೆಯಲ್ಲಿ 76 ಸಾವಿರ ಮತ ಪಡೆದು ಕೇವಲ 18ನೂರು ಮತಗಳ ಅಂತರದಿಂದ ಸೋಲು ಕಂಡಿದ್ದ ಅನೀಲ ಮೆಣಸಿನಕಾಯಿ 2023ರ ಚುನಾವಣೆಯಲ್ಲಿ ಮತ್ತೆ 75 ಸಾವಿರ ಮತಗಳನ್ನು ಪಡೆದುಕೊಂಡು ಸೋಲುಂಡರು ಸಹ ಕ್ಷೇತ್ರದಲ್ಲಿ ತಮ್ಮ ಜನಪ್ರಿಯತೆ ಉಳಿಸಿಕೊಂಡಿದ್ದನ್ನು ಗಮನಿಸಿರುವ ಕಾಂಗ್ರೆಸ್ ಪಕ್ಷವು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮೂಲಕ ಜಾತಿ ಕಾರ್ಡದೊಂದಿಗೆ ಅನೀಲರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳಲು ಸತತ ಪ್ರಯತ್ನ ನಡೆಸಿದೆ ಎಂಬ ಚರ್ಚೆ ತೀವ್ರವಾಗಿದೆ. ತಮ್ಮ ಸೋಲಿಗೆ ಪಕ್ಷದವರ ಒಳ ರಾಜಕೀಯ ಕಾರಣ ಎಂದು ಗದಗ ಜಿಲ್ಲಾ ಬಿಜೆಪಿಯ ಕೆಲ ನಾಯಕರ ಬಗೆಗೆ ಅಸಮಾಧಾನಗೊಂಡಿದ್ದನ್ನೆ ಬಂಡವಾಳವಾಗಿ ಅನೀಲ ಮೆಣಸಿನಕಾಯಿ ಅವರಿಗೆ ಕಾಂಗ್ರೆಸ್ ಬಲೆ ಬಿಸಿದೆ ಎಂಬ ಮಾತು ಕೇಳಲಾಗುತ್ತಿದೆ. ಶೆಟ್ರು, ಶೆಟ್ರು ಒಂದ ಕಡೆ ಸೇರೋಣ ಎಂಬ ಕಾಂಗ್ರೆಸ್ ನಾಯಕ ಜಗದೀಶ ಶೆಟ್ಟರ ಜಾತಿ ಬಲೆಗೆ ಅನೀಲ ಮೆಣಸಿನಕಾಯಿ ಬೀಳ್ತಾರಾ ಎಂಬುದೊಂದು ಪ್ರಶ್ನೆಯಾಗಿದ್ದರೆ ಅನೀಲ ಮೆಣಸಿನಕಾಯಿ ಸೇರ್ಪಡೆಗೆ ಎಚ್ಕೆ ಪಾಟೀಲರು ಗ್ರೀನ್ ಸಿಗ್ನಲ್ ಕೊಡ್ತಾರಾ ಎಂಬುದು ಮತ್ತೊಂದು ಪ್ರಶ್ನೆಯಾಗಿದೆ. ಕೆಪಿಸಿಸಿ ಅಧ್ಯಕ್ಷರು, ರಾಜ್ಯದ ಡಿಸಿಎಂ ಡಿ.ಕೆ.ಶಿವಕುಮಾರ ಅವರ ರಾಜಕಿಯೇತರ ಆಪ್ತರಲ್ಲಿ ಅನೀಲ ಮೆಣಸಿನಕಾಯಿ ಒಬ್ಬರು ಎಂಬುದು ಇಲ್ಲಿ ಗಮನಾರ್ಹವಾಗಿದೆ. ಅನೀಲ ಮೆಣಸಿನಕಾಯಿ ಈ ಹಿಂದೆ ಕಾಂಗ್ರೆಸ್ ದಲ್ಲಿದ್ದರು. ಆ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಆಗಿದ್ದರಲ್ಲದೆ ರಾಜ್ಯದಲ್ಲಿ ಸಂಚಾರ ಮಾಡಿ ಯುವ ಕಾಂಗ್ರೆಸ್ ಬಲವರ್ಧನೆ ಮಾಡಿದ್ದರು. ಈಗ ಬಿಜೆಪಿ ಪಕ್ಷದಲ್ಲಿ ಪ್ರಮುಖ ಯುವ ನಾಯಕರಾಗಿ ಕಾಣಿಸಿಕೊಂಡಿರುವ ಅನೀಲ ಮೆಣಸಿನಕಾಯಿ ಒಂದು ರೀತಿ ವರ್ಣರಂಜಿತ ರಾಜಕಾರಣಿ ಎಂಬುದನ್ನು ಅಲ್ಲಗಳೆಯಲಾಗದು. ಮನು ಕುಲಕ್ಕಾಗಿ ಭಿಕ್ಷೆ, ಒಂದು ರೊಟ್ಟಿ, ಒಂದು ನಾಣ್ಯ, ಜಿಸಿಎಲ್ ಕ್ರಿಕೆಟ್ ಆಯೋಜನೆ, ಜನಾಕರ್ಷಣೆಯ ಹೊಸ ಹೊಸ ಪ್ರಯೋಗಗಳು, ರಾಜಕೀಯ ನಡೆ, ನುಡಿಯ ನಾಯಕತ್ವವನ್ನು ಗುರುತಿಸಿರುವ ಕಾಂಗ್ರೆಸ್ ಅನೀಲ ಮೆಣಸಿನಕಾಯಿ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳಲು ಯತ್ನಿಸುತ್ತಿದೆ ಎಂಬುದುವಾಸ್ತವಿಕ ಸತ್ಯ. ಉತ್ತರ ಕರ್ನಾಟಕದ 12 ಲೋಕಸಭಾ ಕ್ಷೇತ್ರಗಳಲ್ಲಿ ಬರುವ 2024ರ ಚುನಾವಣೆಯಲ್ಲಿ ಕನಿಷ್ಠ 8 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಹೆಣೆಯುತ್ತಿರುವ ರಾಜಕೀಯ ತಂತ್ರ ಯಶಸ್ವಿಯಾಗಲು ಉತ್ತರ ಕರ್ನಾಟಕದ ಬಿಜೆಯ ಪ್ರಮುಖ ನಾಯಕರಿಗೆ ಗಾಳ ಬೀಸಿರುವ ಕಾಂಗ್ರೆಸ್ ಈಗಾಗಲೆ ಶಿರಹಟ್ಟಿ ಕ್ಷೇತ್ರದ ಮಾಜಿ ಶಾಸಕ ರಾಮಣ್ಣ ಲಮಾಣಿಯವರ ವಿಕೇಟ್ ಪಡೆದಿದೆ. ನಿಗಮ ಆಫರ್....? ಕಾಂಗ್ರೆಸ್ ಪಕ್ಷಕ್ಕೆ ಬಂದರೆ ನಿಮಗೊಂದು ನಿಗಮದ ಅಧ್ಯಕ್ಷ ಸ್ಥಾನ ಸಿಗಲಿದೆ ಎಂಬ ಆಫರ್ ಕೊಡುವ ಮೂಲಕ ಈಗ ಅನೀಲ ಮೆಣಸಿನಕಾಯಿ ಸೆಳೆಯಲು ಯತ್ನ ನಡೆಸಿದೆ. *ರಾಜಕೀಯ ನಿರಾಸಕ್ತಿ :* ಆದರೆ ರಾಜಕೀಯ ನಿರಾಸಕ್ತಿಗೆ ಜಾರಿರುವ ಅನೀಲ ಮೆಣಸಿನಕಾಯಿ ಅವರು ನಿರ್ದಾರ ಕೈಗೊಳ್ಳಲು ಕಾಲಾವಕಾಶ ಕೊಡಿ ಎಂದು ಹೇಳುವ ಮೂಲಕ ಸಧ್ಯಕ್ಕೆ ಜಾರಿ ಕೊಂಡಿದ್ದಾರೆಂಬುದು ಚರ್ಚೆಯಲ್ಲಿದೆ. ಅನೀಲ ಮೆಣಸಿನಕಾಯಿ ಬಿಜೆಪಿಯಿಂದ ಹೋಗದಂತೆ ಮಾಜಿ ಸಚಿವರು, ಹಾಲಿ ಶಾಸಕ ಸಿ.ಸಿ.ಪಾಟೀಲ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿ ಹೇಳಿದ್ದಾಗಿಯೂ ಚರ್ಚೆ ಆಗುತ್ತಿದೆ. ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಲು ಹೊರಟಿದ್ದ ಬಿಜೆಪಿಗೆ ಶೆಡ್ಡು ಹೊಡೆದು ನಿಂತಿರುವ ಕಾಂಗ್ರೆಸ್ ನಾಯಕರು ಬಿಜೆಪಿ ಮುಕ್ತ ಕರ್ನಾಟಕ ಮಾಡಲು ಉತ್ತರ ಕರ್ನಾಟಕವನ್ನು ವೇದಿಕೆ ಮಾಡಿಕೊಂಡಿದೆ. ಒಟ್ಟು ಲೋಕಸಭಾ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ರಾಜ್ಯದಲ್ಲಿ ರಾಜಕೀಯ ಡೊಂಬರಾಟ ಜೋರಾಗುತ್ತಿರುವುದರಿಂದ ಯಾರು ಯಾವಾಗ ಯಾವ ಪಕ್ಷದಲ್ಲಿರುತ್ತಾರೆ ಎಂಬುದು ಹೇಳಲು ಸಾಧ್ಯವಿಲ್ಲ. *ಕಾಂಗ್ರೆಸ್ಸಿಗೆ ಲೋಕಸಭೆ ಸವಾಲ್...* ಗ್ಯಾರಂಟಿ ಮೂಲಕ 135 ಸ್ಥಾನಗಳೊಂದಿಗೆ ರಾಜ್ಯದ ಆಡಳಿತ ಚುಕ್ಕಾಣೆ ಹಿಡಿದಿರುವ ಕಾಂಗ್ರೆಸ್ ಬರುವ ಲೋಕಸಭಾ ಚುನಾವಣೆಯಲ್ಲಿಯೂ ತನ್ನ ಜನಪ್ರಿಯತೆ ತೋರಿಸಬೇಕಾದ ಅನಿವಾರ್ಯತೆ ಇದೆ. ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಮೇಲೆ ಭರವಸೆ ಇಟ್ಟುಕೊಂಡಿದೆ. ಹೀಗಾಗಿ ಹೈಕಮಾಂಡ್ ಭರವಸೆಯನ್ನು ಹುಸಿ ಮಾಡದಂತೆ ಬರುವ ಲೋಕಸಭಾ ಚುನಾವಣೆಯಲ್ಲಿ ಕನಿಷ್ಟ 20 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸವಾಲ್ ಎದುರಿಸಲು ರಾಜ್ಯ ಕಾಂಗ್ರೆಸ್ ಹಿಡಿದ ಅಸ್ತ್ರವೇ ಆಪರೇಷನ್ ಹಸ್ತ ಎಂಬುದು ಸುಳ್ಳಲ್ಲ.
© ASK News Kannada. All Rights Reserved. Designed by AGScurate IT Solutions LLP