ಗದಗ, ಮಾ. 9 : ಸಮಾನ ಅವಕಾಶಗಳು ಸಿಕ್ಕರೆ ತೊಟ್ಟಿಲು ತೂಗುವ ಕೈ ದೇಶವನ್ನು ತೂಗಬಲ್ಲದು ಎಂದು ಜಿಲ್ಲಾ ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಶ್ರೀಮತಿ ಸವಿತಾ ಶಿಗ್ಲಿ ಹೇಳಿದರು. ಅವರು ಚಕ್ರವರ್ತಿ ಕನ್ನಡ ದಿನಪತ್ರಿಕೆ ಹಾಗೂ ಆಸ್ಕ್ ನ್ಯೂಸ್ ಚಾನಲ್ ಸಹಯೋಗದಲ್ಲಿ ರೋಟರಿ ಸಂಸ್ಥೆಯಲ್ಲಿ ಏರ್ಪಡಿಸಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಣೆಯಲ್ಲಿ ಕೇಕ್ ಕಟ್ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ನಾವು ಸವಾಲಿನ ಬಗ್ಗೆ ಸ್ಪಷ್ಟ ದೃಷ್ಟಿಯನ್ನು ಹೊಂದಿದ್ದರೆ ಏನೆಲ್ಲಾ ಸಾಧನೆಯನ್ನು ಸಾಧಿಸಬಹುದು ಎಂದರು. ಎಲ್ಲಾ ಮಹಿಳೆಯರು ಮತ್ತು ಯುವತಿಯರು ಸೇರಿ ಎಲ್ಲರಿಗೂ, ಎಲ್ಲ ರೀತಿಯ ಹಕ್ಕುಗಳು ಸಿಕ್ಕಾಗ ಸಮಾಜಿಕ ವ್ಯವಸ್ಥೆ ಬದಲಾಗಲಿದೆ ಎಂದರು. ನಗರಸಭೆ ಉಪಾಧ್ಯಕ್ಷೆ ಶ್ರೀಮತಿ ಶಕುಂತಲಾ ಅಕ್ಕಿ ಹಾಗೂ ನಗರ ಸಭೆ ಸದಸ್ಯೆ ಶ್ರೀಮತಿ ಲಲಿತಾ ಬಿ.ಅಸೂಟಿಯವರು ಮಾತನಾಡಿ ಮಹಿಳೆಯರು ಸಂಕುಚಿತ ಮನೋಭಾವನೆ ಬಿಟ್ಟು ಸಮಪಾಲು, ಸಮಬಾಳು, ಸಮಾನತೆಯ ಸಮಾಜ ನಿರ್ಮಾಣಕ್ಕಾಗಿ ಒಂದಾಗಿ ಹೋರಾಡಬೇಕಾದ ಅಗತ್ಯತೆ ಅರಿತಾಗ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಆಚರಣೆಗೆ ಅರ್ಥ ಬರುತ್ತದೆ ಎಂದರು. ಗದಗ ಬೆಟಗೇರಿ ಇನ್ನರವೀಲ್ ಸಂಸ್ಥೆ ಮಾಜಿ ಅಧ್ಯಕ್ಷೆ ಶ್ರೀಮತಿ ನೀಲಾಂಬಿಕಾ ಪ್ರದೀಪ ಉಗಲಾಟ ಹಾಗೂ ಯೋಗಾ ಗುರೂಜಿ ಮಮತಾ ಸತಗಯಪ್ಪನವರ ಮಾತನಾಡಿ ಪ್ರಾಚೀನ ಕಾಲದ ಭಯಾನಕತೆಗಳು, ಹಿಂಸೆ, ತಾರತಮ್ಯ ಮತ್ತು ಆರ್ಥಿಕ ಅಸಮಾನತೆ ಇಂದಿಗೂ ಮಹಿಳೆಯರನ್ನು ಪೀಡಿಸುತ್ತಿವೆ ಎಂದರಲ್ಲದೆ ಮಹಿಳೆಯರು ಮತ್ತು ಯುವತಿಯರಿಗೆ ಸಮಾನ ಅವಕಾಶದ ಬಾಗಿಲು ತೆರೆದಾಗ ಮಾತ್ರ ಮಹಿಳೆಯರ ಗೆಲುವು ಸಾಧ್ಯವಿದೆ ಎಂದರು. ಖ್ಯಾತ ಸ್ತ್ರೀರೋಗ ತಜ್ಞೆ ಡಾ.ಪ್ರಭಾ ದೇಸಾಯಿ ಹಾಗೂ ಗದಗ ಶಹರ ಪಿ.ಎಸ್.ಐ. ಶ್ರೀಮತಿ ಗಿರಿಜಾ ಜಕ್ಕಲಿ, ಸ್ತ್ರೀದ್ವೇಷ ಬಿಟ್ಟು ಸಮಾನ ಹಕ್ಕುಗಳನ್ನು ಮುಖ್ಯವಾಹಿನಿಗೆ ತಂದಾಗ ಮಾತ್ರ ಮಹಿಳಾ ದಿನಾಚರಣೆಯ ಆಚರಣೆಗೆ ಬೆಲ ಸಿಗಲಿದೆ ಎಂದರು. ಆರಂಭದಲ್ಲಿ ಶುಶ್ರಾವ್ಯವಾಗಿ ಸಂಗೀತ ಸುಧೆ ಹರಿಸಿದ ಖ್ಯಾತ ಗಾಯಕಿ ಉಷಾ ಕಾರಂತ ಮತ್ತು ಸಂಗೀತ ಸಾಧಕಿ ಶ್ರೀಮತಿ ಕಬಾಡಿ ಮಾತನಾಡಿ ಮಹಿಳೆಯರು ಮತ್ತು ಯುವತಿಯರ ಮೇಲಿನ ಎಲ್ಲಾ ರೀತಿಯ ಹಿಂಸಾಚಾರವನ್ನು ಕೊನೆಗೊಳಿಸಲು ಕಾನೂನುಗಳನ್ನು ಬಲಪಡಿಸಲು ಮತ್ತು ಜಾರಿಗೆ ತರಲು ಕ್ರಮವಹಿಸಬೇಕಂದರು. ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗೌರವಿಸಲು ಈ ದಿನವು ಅತ್ಯಂತ ಪ್ರಾಮುಖ್ಯವಾಗಿದೆ ಎಂದು ಬಿಜೆಪಿ ನಾಯಕಿ ವಿಜಯಲಕ್ಷ್ಮಿ ಮಾನ್ವಿ ಅಭಿಪ್ರಾಯಪಟ್ಟರು. ಪತ್ರಕರ್ತರಾದ ಅನಂತ ಎಸ್.ಕಾರ್ಕಳ ಕಾರ್ಯಕ್ರಮ ನಿರೂಪಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಡಾ.ಪ್ರದೀಪ ಉಗಲಾಟ ಸ್ವಾಗತಿಸಿದರು. ನ್ಯಾಯವಾದಿ ಟಿ.ಎನ್.ಭಾಂಡಗೆ ವಂದಿಸಿದರು. ಕ್ಯಾಟ್ರಿಂಗ್ ಉದ್ಯಮಿ ವಿಜಯಕುಮಾರ(ಅಪ್ಪಣ್ಷ) ವಸ್ತ್ರದ, ನ್ಯಾಯವಾದಿ ಜಬ್ಬರಖಾನ್ ಪಠಾಣ ಉಪಸ್ಥಿತರಿದ್ದರು.
© ASK News Kannada. All Rights Reserved. Designed by AGScurate IT Solutions LLP