ಗದಗ, ಮಾ. 14 : ಒಂಟಿ ಮಹಿಳೆ ಇರುವ ಮನೆಯಲ್ಲಿ ದರೋಡೆ ಮಾಡಿ ಕೊಲೆಗೈದ ಆರೋಪಿತರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಗದಗ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧಿಶರಾದ ಶ್ರೀ ಬಸವರಾಜ ಅವರು ಆದೇಶಿಸಿದ್ದಾರೆ. ಬೆಟಗೇರಿ ಪೋಲೀಸ್ ಠಾಣೆ ಹದ್ದಿಯ ಬೆಟಗೇರಿ ಹೆಲ್ತ್ ಕ್ಯಾಂಪ್ ನಗರದಲ್ಲಿ ಸಿಟಿಎಸ್ ನಂ: 4053/1 ರ ಮನೆಯಲ್ಲಿ ಮೃತ ಶ್ರೀಮತಿ ಸರೋಜಾ ಕೋಂ, ತುಳಸಿನಾಥಸಾ ಕಬಾಡಿ ಇವಳು ಒಬ್ಬಳೇ ಮನೆಯಲ್ಲಿ ವಾಸ ಇರುವದನ್ನು ನೋಡಿ ಖಾತ್ರಿ ಪಡಿಸಿಕೊಂಡಿದ್ದಾರೆ. ನಂತರ ಆರೋಪಿತರೆಲ್ಲರೂ ಕೂಡಿಕೊಂಡು ಕೊಲೆ ಮಾಡಿ ದರೋಡೆ ಮಾಡುವ ಉದ್ದೇಶದಿಂದ ಬಾಗಿಲದ ಬಾಜು ಇರುವ ಕಿಡಕಿಯ ಜಾಲರಿಯನ್ನು ಹರಿದು ನೋಡಿದಾಗ ಮನೆಯಲ್ಲಿ ಯಾರು ಕಾಣದೆ ಇರುವದರಿಂದ 05 ನೇ ಆರೋಪಿತನು ಬಾಗಿಲದ ಬೋಲ್ಟನ್ನು ಕಬ್ಬಿಣದ ರಾಡದಿಂದ ಮೀಟಿ ಮುರಿದ ನಂತರ 06 ಜನ ಆರೋಪಿತರು ಸೇರಿ ಮನೆ ಒಳಗೆ ಹೋಗಿ ರೂಮ್‌ದಲ್ಲಿ ವಯಸ್ಸಾದ ಹೆಣ್ಣು ಮಗಳು ಮಲಗಿಕೊಂಡಿದ್ದಾಳೆ. ಈ ಮಹಿಳೆ ಎಚ್ಚರವಾಗಿ ಆರೋಪಿತರನ್ನು ಕಂಡು ಚೀರಾಡಲು ಹತ್ತಿದಾಗ 05ನೇ ಆರೋಪಿತನು ಅವಳ ಬಾಯಿಯನ್ನು ಕೈಯಿಂದ ಗಟ್ಟಿಯಾಗಿ ಹಿಡಿದಿದ್ದು 01, 02, 04, ಮತ್ತು 06ನೇ ಆರೋಪಿತರು ಸೇರಿ ಮಹಿಳೆ ಕೈ ಕಾಲುಗಳನ್ನು ಹಿಡಿದುಕೊಂಡಾಗ 03ನೇ ಆರೋಪಿತನು ಕಟ್ಟಿಗೆಯಿಂದ ಅವಳ ತಲೆಯ ಹಿಂದೆ ಜೋರಿನಿಂದ ಹೊಡೆದು ಭಾರೀ ಗಾಯಪಡಿಸಿ ಅವಳನ್ನು ಮರಣಪಡಿಸಿದ ನಂತರ ರೂಮದಲ್ಲಿದ್ದ ಟ್ರೇಜರಿಯನ್ನು ಅಂಗಾತ ಕೆಡವಿ ಅದರ ಲಾಕರ್‌ನ್ನು 05 ನೇ ಆರೋಪಿತನು ಕಬ್ಬಿಣದ ರಾಡ್‌ದಿಂದ ಮೀಟಿ ಮುರಿದು ಅದರಲ್ಲಿದ್ದ ಒಟ್ಟು 260 ಗ್ರಾಂ ಅಂದಾಜು ಕಿಮ್ಮತ್ತು 9,50,000/- ರೂ ಮಾಲನ್ನು ದರೋಡೆ ಮಾಡಿಕೊಂಡು ಹೋದ ಅಪರಾಧ ಎಸಗಿದ್ದಾರೆಂದು ಆರೋಪಿತರ ವಿರುದ್ಧ ಬೆಟಗೇರಿ ವೃತ್ತ ಸಿ.ಪಿ.ಐ. ವೆಂಕಟೇಶ ಕೆ. ಯಡಹಳ್ಳಿಯವರು ದೋಷಾರೋಪಣ ಪಟ್ಟಿಯನ್ನು ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಬಸವರಾಜರವರು ಸದರ ಪ್ರಕರಣದಲ್ಲಿ ಆರೋಪ ರುಜುವಾತು ಆಗಿದ್ದರಿಂದ ಆರೋಪಿತರಾದ 1) ಶಂಕ್ರಪ್ಪ ಶಿವಪ್ಪ ಹರಣಶಿಕಾರಿ 2) ಚಂದ್ರಪ್ಪ ಸೋಮಶೇಖರ ಹರಣಶಿಕಾರಿ 3) ಮಾರುತಿ ಚನ್ನಪ್ಪ ರೋಣ 4) ಮನ್ನಪ್ಪ ಪುತನಪ್ಪ ರೋಣ 6) ಉಮೇಶ ಅರ್ಜುನ ಹರಣಶಿಕಾರಿ ಇವರಿಗೆ ದಿನಾಂಕ-14-03-2025 ರಂದು ಭಾರತೀಯ ದಂಡ ಸಂಹಿತೆ 396, 411 ರಡಿ ಜೀವಾವಧಿ ಶಿಕ್ಷೆ ಹಾಗೂ ತಲಾ 10,000/-ದಂಡ. ಮತ್ತು 7 ನೇ ಆರೋಪಿತನಾದ ಪ್ರಮೋದ ರಾಮಪ್ಪ ಕೊರವರ ಇವನಿಗೆ ಭಾ.ದಂ.ಸಂ 396, 411 ರಡಿ 3 ವರ್ಷ ಶಿಕ್ಷೆ ಹಾಗೂ ರೂ.3000/-ದಂಡ ಶಿಕ್ಷೆ ವಿಧಿಸಿ ತೀರ್ಪು ನೀಡಿ ಆದೇಶಿಸಿದ್ದಾರೆ. ಸದರಿ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಗದಗ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಶ್ರೀಮತಿ ಸವಿತಾ ಎಂ. ಶಿಗ್ಲಿ ಅವರು ಸಾಕ್ಷಿ ವಿಚಾರಣೆ ಮಾಡಿ ವಾದವನ್ನು ಮಂಡಿಸಿದರು.
© ASK News Kannada. All Rights Reserved. Designed by AGScurate IT Solutions LLP