ask-banner
ad-banner
ರಾಜ್ಯ 2025-03-16

ಶೇರ್ ಮಾಡಿ  

*ಹಠಯೋಗಿ ಕೆ.ಎಚ್.ಪಾಟೀಲ್ರು...* *ನಿಮ್ಮಂತೆ ನಾವಾಗಬೇಕು ಶಪಥದ ಶತಮಾನೋತ್ಸವ..*

ಕರ್ನಾಟಕ ಕಂಡ ಅಪರೂಪದ ರಾಜಕಾರಣಿ, ನಾಡಿನ ಜನಮನ ಗೆದ್ದ ಮಹಾನ್ ನಾಯಕ, ಸಮರ್ಥ ಅಡಳಿತಗಾರ, ಸಂಸದೀಯ ಪಟು, ಸಹಕಾರಿ ರಂಗವನ್ನು ಶ್ರೀಮಂತಗೊಳಿಸಿ ಸಹಕಾರಿ ರಂಗದ ಭೀಷ್ಮ ಎಂದೆ ಖ್ಯಾತ ನಾಮದಯರಾದ ದಿ.ಕೆ.ಎಚ್.ಪಾಟೀಲರು ಚೈತನ್ಯಶೀಲ ಕನಸುಗಾರ ಎಂಬುದನ್ನು ಅಲ್ಲಗಳೆಯಲಾಗದು. ಆತ್ಮಗೌರವದಕ್ಕೆ ಹೆಸರಾಗಿದ್ದ ಕೆ.ಎಚ್. ಪಾಟೀಲರು ಅಧಿಕಾರಕ್ಕಾಗಿ ಹಪಹಪಿಸಲಿಲ್ಲ. ಭಯ ಇವರ ಬಳಿ ಬರಲಿಲ್ಲ, ಭಾದಿಸಲಿಲ್ಲ, ವ್ಯವಹಾರಿಕ ಪ್ರಜ್ಞೆಯ ಸಿದ್ಧಾಂತವನ್ನು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಬಿಟ್ಟು ಕೊಡದ ಎದೆಗಾರಿಕೆಯ ಕೆ.ಎಚ್.ಪಾಟೀಲರಲ್ಲಿ ರೈತರ ಪರ ನಿಲುವು, ಜನಪರ ಕಾಳಜಿ, ಬದ್ಧತೆ, ರಕ್ತದಲ್ಲಿ ಹರಿಯುತ್ತಿತ್ತು. ಅನ್ಯಾಯದ ವಿರುದ್ಧ ಹೋರಾಡಲು ಸದಾ ತಾ ಮುಂದು ಎಂಬಂತಿದ್ದ ಕೆ.ಎಚ್. ಪಾಟೀಲರು ಬಹುಮುಖ ಪ್ರತಿಭೆಯ ವ್ಯಕ್ತಿತ್ವವಾಗಿತ್ತು. ವರ್ಣರಂಜಿತ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಾಗಲೂ ಸಹ ಕುಗ್ಗದೆ ಮತ್ತೆ ಫಿನಿಕ್ಷ ಪಕ್ಷಿಯಂತೆ ಎದ್ದು ನಿಲ್ಲುವ ಗಟ್ಟಿ ಗುಂಡಿಗೆಯ ಗೌಡ್ರು ನಮ್ಮ ಕೆ.ಎಚ್.ಪಾಟೀಲರು. ಸೋಲಿಗೆ ಅಂಜದೆ, ಅಳುಕದೆ, ಮರುಗದೆ, ಗೆಲುವಿನಲ್ಲಿ ತಮ್ಮ ತನವನ್ನು ಮರೆಯದೆ ಸದಾಕಾಲ ಸ್ಪಷ್ಟತೆಯ, ಸಹಜ ನಿಲುವಿನ ವ್ಯಕ್ತಿತ್ವದೊಂದಿಗೆ ನಿರ್ಭೀತ ಮಾತುಗಳೊಂದಿಗೆ, ನಿಷ್ಕಪಟ ನಡೆ ನುಡಿಯಲ್ಲಿ, ನಿಸ್ವಾರ್ಥ ಮೈತ್ರಿ,ಯಲ್ಲಿ, ಮೃದು ಮನಸ್ಸಿನ ಸೆಳೆತದಲ್ಲಿ, ತನ್ನನ್ನು ನಂಬಿ ಬೆನ್ನಿಗೆ ಬಿದ್ದವರನ್ನು ರಕ್ಷಿಸುತ್ತಾ ಸಾಗಿದ ದಿ. ಕೆ. ಎಚ್. ಪಾಟೀಲರು ಇಂದಿನ ರಾಜಕಾರಣಿಗಳಿಗೆ ಮಾದರಿಯಾಗಿದ್ದು ಸುಳ್ಳಲ್ಲ. ಕೆ. ಎಚ್. ಪಾಟೀಲರೊಂದಿಗಿನ ಒಡನಾಡಿಗಳು ಹೇಳುವಂತೆ ಅವರ ಮಾತು ಸ್ವಲ್ಪ ಒರಟಾದರು ಉತ್ತರ ಕರ್ನಾಟಕದ ಭಾಷೆ-ಬದುಕಿನ ಮೂರ್ತರೂಪರಾಗಿದ್ದರಲ್ಲದೆ ಗಟ್ಟಿತನದ ಛಲದಂಕ ಮಲ್ಲ ಎನ್ನುವಂತಿದ್ದರು. ಕೆ. ಎಚ್. ಪಾಟೀಲರು ನಾಲ್ಕು ಬಾರಿ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. 1972 ರಲ್ಲಿ ದಿ.ದೇವರಾಜು ಅರಸು ಸಚಿವ ಸಂಪುಟದಲ್ಲಿ ಮೊದಲ ಭಾರಿ ಅರಣ್ಯ ಸಚಿವರಾಗಿ, 1989ರಲ್ಲಿ ವಿರೇಂದ್ರ ಪಾಟೀಲರ ಸಂಪುಟದಲ್ಲಿ ಕಂದಾಯ ಸಚಿವರಾಗಿ, ಎಸ್.ಬಂಗಾರಪ್ಪ ಸಚಿವ ಸಂಪುಟದಲ್ಲಿ ಸಹಕಾರ, ಕಂದಾಯ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಸಚಿವರಾಗಿ, ಇದರಲ್ಲಿ ಎರಡು ಅವಧಿಗೆ ವಿರೋಧ ಪಕ್ಷದಲ್ಲಿ, ಎರಡು ಅವಧಿಗೆ ಆಡಳಿತ ಪಕ್ಷದ ಪ್ರಮುಖರಾಗಿದ್ದರು. ಕೆ. ಎಚ್. ಪಾಟೀಲರು ಕೆ.ಪಿ.ಸಿ.ಸಿ.ಅಧ್ಯಕ್ಷರಾಗಿದ್ದರಲ್ಲದೆ ಅಧ್ಯಕ್ಷರಾಗಿ ಪಕ್ಷ ಹೇಗೆ ಕಟ್ಟಬೇಕು, ಕಾರ್ಯಕರ್ತರನ್ನು ಹೇಗೆ ಸೆಳೆಯಬೇಕು, ತಮ್ಮ ಪಕ್ಷದ ಆಡಳಿತ ಸರಕಾರಕ್ಕೆ ಹೇಗೆ ಗೈಡ ಮಾಡಬೇಕು ಎಂಬುದಕ್ಕೆ ಅನುಕರಣೀಯ ರಾಗಿದ್ದ ಕೆ.ಎಚ್.ಪಾಟೀಲರು ರಾಜಕೀಯಕ್ಕೆ, ರಾಜಕಾರಣಿಗಳಿಗೆ, ಪಕ್ಷದ ಆಡಳಿತ ವ್ಯವಸ್ಥೆಗೆ ವ್ಯಕ್ತಿಯಲ್ಲ ಶಕ್ತಿಯಾಗಿ ಸಾಕ್ಷೀಕರಿಸಿದ್ದಾರೆ. ಸದನದ ಒಳಗೆ, ಸಚಿವ ಸಂಪುಟದೊಳಗೆ ಮಿಂಚಿನಂತಹ ಮಾತು, ಹರಳು ಹುರಿದಂತೆ ಮಾತನಾಡುವ ಕೌಶಲ್ಯ, ಪಾದರಸದಂತೆ ಕೆಲಸದಲ್ಲಿದ್ದ ಕಾರ್ಯಕ್ಷಮತೆಯಿಂದಾಗಿ ಕೆ. ಎಚ್. ಪಾಟೀಲರು ರಾಜಕೀಯ, ಸಹಕಾರ ರಂಗ, ಕೃಷಿ ಕ್ಷೇತ್ರದಲ್ಲಿ ಸದಾ ಸ್ಮರಣೀಯರಾಗಿದ್ದಾರೆ. ಕೆ. ಎಚ್. ಪಾಟೀಲರು ಸಚಿವರಾಗಿದ್ದ ಅವಧಿ ಕಮ್ಮಿ. ಆದರೆ ಅವರು ವಹಿಸಿಕೊಂಡ ಬಹಳಷ್ಟು ಇಲಾಖೆಗಳಲ್ಲಿ ನಿರ್ವಹಿಸಿದ ಆಡಳಿತ ಅಪ್ಪಿ ಒಪ್ಪುವಂತಿರುವುದರಿಂದಲೆ ಇಂದಿಗೂ ಅವರನ್ನು ನಾಡು ಸ್ಮರಿಸುತ್ತಿದೆ. ಕೆ.ಎಚ್.ಪಾಟೀಲರಿದ್ದ ಪರಿಸರದಲ್ಲಿ ಸದಾ ಲವಲವಿಕೆ ಇರುತ್ತಿತ್ತಲ್ಲದೆ ಆತ್ಮೀಯತೆ, ಆದರ್ಶತೆ, ಅನುಕರಣೆ ಎಂಬಂತೆ ಘೋಚರಿಸುತ್ತಿತ್ತು. ಅವರಾಡುವ ಪ್ರತಿಯೊಂದು ಮಾತುಗಳಲ್ಲಿ ತೂಕ ಇರುತ್ತಿತ್ತು, ರಾಜ್ಯದ ಹಿತ ಇರುತ್ತಿತ್ತು, ವಿಚಾರಕ್ಕೆ ತಳ್ಳುತ್ತಿದ್ದವು, ಕಾರ್ಯ ಚಟುವಟಿಕೆಗಳಿಗೆ ಸ್ಪೂರ್ತಿದಾಯಕವಾಗಿದ್ದವು. ಕೆ. ಎಚ್. ಪಾಟೀಲರು ಜೀವಿಸಿದ್ದು ಕೇವಲ ೬೭ ವರ್ಷ ಆದರು ಅವರು ಜೀವನ ಪೂರ್ತಿ ಸರಕಾರ, ಸಮಾಜ, ಸಾರ್ವಜನಿಕ ಸೇವೆಗೆ ಸಮರ್ಪಿಸಿಕೊಂಡಿದ್ದರು. ಕೆ. ಎಚ್. ಪಾಟೀಲರ ಆಡಳಿತ, ನೀತಿ ನಿರೂಪಣೆಗಳು, ವಿರೋಧ ಪಕ್ಷದಲ್ಲಿದ್ದಾಗಿನ ಸದನಗಳಲ್ಲಿ ಮಾಡುತ್ತಿದ್ದ ವಿಮರ್ಶಾತ್ಮಕ ಚರ್ಚೆಗಳು, ಸರಕಾರದ ಒಳಗೆ ಹೊರಗೆ ಮಾಡುತ್ತಿದ್ದ ಭಾಷಣಗಳು ಜನಮನ ಸೆಳೆದಿದ್ದರಿಂದಲೇ ಇಂದು ನಾಡು ಮೆಚ್ಚಿದ ನಾಯಕ ಎಂದು ಕೆ. ಎಚ್. ಪಾಟೀಲರು ಗೌರವಿಸಲ್ಪಡುತ್ತಿದ್ದಾರೆ. ಕೆ. ಎಚ್. ಪಾಟೀಲರು ವಿಶಾಲ ಕರ್ನಾಟಕ ಕನ್ನಡ ದಿನ ಪತ್ರಿಕೆ ಆರಂಭಿಸಿ ಸರಕಾರದ ಕಣ್ಣು ತೆರೆಸುವ ಕಾರ್ಯ ಜನಧ್ವನಿಯಾಗಿದ್ದರೆ ಕೆ.ಪಿ.ಸಿ.ಸಿ ಅಧ್ಯಕ್ಷರಾಗಿ ಕೆ.ಪಿ.ಸಿ.ಸಿ ಅಂಗ ಸಂಸ್ಥೆಗಳನ್ನು ಚುರುಕುಗೊಳಿಸಿಲು. ಪಕ್ಷದ ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಲು ಕಾಂಗ್ರೆಸ್ ದರ್ಶನ ವಾರ ಪತ್ರಿಕೆ ಆರಂಭಿಸಿ ಪಕ್ಷದ ಬಲವರ್ಧನೆಗೆ ಹೊಸ ರೂಪ ಕೊಟ್ಟರು. ಇದರ ಜೊತೆಗೆ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದು ಕೆ.ಎಚ್.ಪಾಟೀಲರ ಕ್ರಾಂತಿಕಾರಿ ಹೆಜ್ಜೆಗೆ ಗೆಜ್ಜೆ ಕಟ್ಟಿದಂತಾಗಿತ್ತು. ಪಕ್ಷದಲ್ಲಿ ವಿವಾದದ ಕಹಳೆ ಮೊಳಗಿದಾಗ ಪಕ್ಷದ ಧ್ವಜ ಎತ್ತಿ ಹಿಡಿದು ನಿಂತು ಪಕ್ಷ ಹಾಗೂ ಸರಕಾರದ ಮಧ್ಯ ಹೊಂದಾಣಿಕೆಯಿಂದ ಕೆಲಸ ಮಾಡಲು ಕೋ-ಆರ್ಡಿನೇಟಿಂಗ್ ಕಮಿಟಿ ರಚಿಸಿದವರು. ಸಚಿವರ ಸಾಧನೆಗಳನ್ನು ಪಕ್ಷದ ಸಭೆಗಳಲ್ಲಿ ಪರಾಮರ್ಶೆಗೆ ಒಳಪಡಿಸಿದವರು. ಸದನದ ಕಲಾಪಗಳಲ್ಲಿ ತಪ್ಪದೆ ಹಾಜರಾಗುತ್ತಿದ್ದ ಕೆ.ಎಚ್.ಪಾಟೀಲರು ಸದಾ ಲವಲವಿಕೆಯಿಂದ ಸಕ್ರಿಯರಾಗಿರುತ್ತಿದ್ದರು ಎಂಬುದನ್ನು ಅವರ ಅನುಯಾಯಿಗಳು ನೆನಪಿಸಿಕೊಳ್ಳುತ್ತಿದ್ದಾರೆ. ೧೯೯೨ರ ಫೆಬ್ರವರಿ ೯ ರಂದು ಕೆ.ಎಚ್.ಪಾಟೀಲ ವಿಧಿವಶರಾದಾಗ ರಾಜ್ಯವೇ ಮಮ್ಮಲ ಮರುಗಿತು. ವಿಧಾನ ಸಭೆ, ವಿಧಾನ ಪರಿಷತ್ ಗಳಲ್ಲಿ ಸಂತಾಪ ಸುನಾಮಿಯಂತೆ ಹರಿದಿದ್ದು ದಕ್ಷ ಸಮರ್ಥ ಆಡಳಿತಗಾರ, ಸಮೃದ್ಧ ನಾಡಿನ ಕನಸುಗಾರ, ಎಲ್ಲಕ್ಕೂ ಮಿಗಿಲಾಗಿ ಒಬ್ಬ ಅಪ್ಪಟ ಸಹಕಾರಿಯನ್ನು, ರೈತರ ಕಣ್ಮಣಿಯನ್ನು ಕಳೆದುಕೊಂಡಿದ್ದು ನಿಜಕ್ಕೂ ಸಾರ್ವತ್ರಿಕ ವೇದನೆ ಕಾಣಿಸಿತ್ತು ಕೆ. ಎಚ್. ಪಾಟೀಲರ ಉಸಿರೆ ಸಹಕಾರವಾಗಿತ್ತು, ಅನ್ನದಾತರೆ ಹೆಸರಾಗಿದ್ದರು, ಜನಪರ ಸೇವೆಯೇ ಅವರ ಗುರಿಯಾಗಿತ್ತು. ಶೋಷಣೆ ಮುಕ್ತ ಗ್ರಾಮೀಣ ಬದುಕಲು ಸಹಕಾರ ಕ್ಷೇತ್ರ ಮಾತ್ರ ಪ್ರಬಲ ಅಸ್ತ್ರವೆಂಬ ಸಂದೇಶ ಸಾರಿದ ಸಹಕಾರಿ ರಂಗದ ಭೀಷ್ಮ ದಿ.ಕೆ.ಎಚ್.ಪಾಟೀಲರು ಹೇಳಿದ್ದನ್ನು ಮಾಡಿ ತೋರಿಸಿದರು. ಕೆ. ಎಚ್. ಪಾಟೀಲರ ರೈತಪರ ನಿಲುವು, ಕೃಷಿ ಚಿಂತನೆ, ಸಹಕಾರ ರಂಗದ ಅಭಿವೃದ್ಧಿ ಸಂದೇಶ, ಕೆ.ಎಚ್.ಪಾಟೀಲಲರ ದೃಷ್ಟಿಯಲ್ಲಿಯ ಸರಕಾರದ ಕಾರ್ಯಯೋಜನೆಗಳು, ಯೋಚನೆಗಳು, ಚಿಂತನೆಗಳು, ಸಲಹೆಗಳನ್ನು ಅರಿತುಕೊಂಡು ಅವಗಳತ್ತ ಚಿತ್ತ ಹರಿಸಿದರೆ ಹೊಸ ಸಮಾಜ, ಸರಕಾರ ಕಟ್ಟಲು ಪ್ರೇರಣೆ, ಪ್ರೋತ್ಸಾಹವಾಗಬಹುದು. ಬುಲ್ಡೋಜರಂತೆ ಕಾರ್ಯಕ್ಷಮತೆಯ ದಿ.ಕೆ.ಎಚ್.ಪಾಟೀಲರ ಬದುಕು ಬರಹ, ಸಹಕಾರ ಸಂದೇಶ, ಕೃಷಿ ನೀತಿ, ರೈತ ನೀತಿ, ರಾಜಕೀಯ ನಿಲುವು, ಸಮಾಜಮುಖಿ ಚಿಂತನೆ, ಪತ್ರಿಕೋದ್ಯಮ ಸೇರಿ ಅವರ ಗಟ್ಟಿತನ, ದಿಟ್ಟತನ, ಶ್ರೇಷ್ಟತೆ, ಜೇಷ್ಟತೆ, ಸ್ವಾಭಿಮಾನ, ನಿಷ್ಪಕ್ಷಪಾತ, ನಿಸ್ವಾರ್ಥತೆ, ಸಮಯ ಪ್ರಜ್ಞೆ, ಆಡಿದ ಮಾತು, ನಡೆದ ಹಾದಿ, ಪ್ರಶ್ನಾತೀತ ಆದರ್ಶತೆಗಳನ್ನು ಇಂದಿನ, ಭವಿಷ್ಯತ್ತಿನ ರಾಜಕಾರಣಿಗಳು ಅನುಸರಿಸಿದರೆ ರಾಜ್ಯ, ರಾಜ್ಯದ ಅಭಿವೃದ್ಧಿ, ಜನರ ಬದುಕು ಬದಲಾವಣೆ ಆಗುವಲ್ಲಿ ಸಂಶಯವೇ ಇಲ್ಲ...

Anant S. Karkal
ವೀಕ್ಷಣೆ 357

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP