ಬಿಜೆಪಿಯ 18 ಶಾಸಕರಮ್ನು 6 ತಿಂಗಳ ಕಾಲ ಅಮಾನತ್ತಗೊಳಸಿರುವುದನ್ನು ಮರು ಪರಿಶೀಲಿಸಬೇಕೆಂದು ಒತ್ತಾಯಿಸಿ ಸ್ಪೀಕರ ಯು.ಟಿ. ಖಾದರರವರಿಗೆ ಕರ್ನಾಟಕ ಶಾಸಕಾಂಗ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರು, ಮಾಜಿ ಸಚಿವರು, ಹಾಲಿ ಶಾಸಕರಾದ ಸಿ.ಸಿ.ಪಾಟೀಲರು ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಸ್ಪೀಕರ್ ಯು.ಟಿ.ಖಾದರ ಅವರು ನಡೆಸಿದ ಕಲಾಪದ ಬಗೆಗೆ ಪ್ರಸಂಶೆ ವ್ಯಕ್ತಪಡಿಸಿರುವ ಸಿ.ಸಿ.ಪಾಟೀಲರು 18 ಶಾಸಕರ ಅಮಾನತ್ ಬಗೆಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಾವು ಕೈಗೊಂಡ ಕ್ರಮ ತೀವ್ರ ಟೀಕೆಗೆ ಗುರಿಯಾಗಿದ್ದರಿಂದ ಮತ್ತೊಮ್ಮೆ ಈ ಬಗೆಗೆ ಮರು ಚಿಂತನೆ ಮಾಡಿ ಅಮಾನತ್ ಗೊಳಿಸಿದ ಅವಧಿಯನ್ನು 15 ದಿನಕ್ಕೆ ಕಡಿತಗೊಳಿಸಬೇಕೆಂದು ಪತ್ರದಲ್ಲಿ ಮನವಿ ಮಾಡಿದ್ದಾರೆ. *ಸಿ.ಸಿ.ಪಾಟೀಲರ ಪತ್ರದಲ್ಲಿ ಏನಿದೆ...?* ಮಾನ್ಯ ಸಭಾಧ್ಯಕ್ಷರೆ, ದಿನಾಂಕ : 03-03-2025 ರಿಂದ 19-03-2025 ರ ಅವಧಿಯವರೆಗೆ ವಿಧಾನ ಸಭೆಯ ಕಾರ್ಯ ಕಲಾಪಗಳನ್ನು ಅತಿ ಅಚ್ಚುಕಟ್ಟಾಗಿ ನಡೆಸಿದ್ದೀರಿ. ಅಲ್ಲದೇ ಶಾಸಕರ ಭವನದಲ್ಲಿರುವ ಶಾಸಕರಿಗೆ ಬೆಳಗಿನ ಉಪಹಾರ ಹಾಗೂ ಎಲ್ಲ ಶಾಸಕರಿಗೆ ಮಧ್ಯಾಹ್ನದ ಭೋಜನ, ಸಂಜೆ ಲಘು ಉಪಹಾರದ ವ್ಯವಸ್ಥೆಯನ್ನು ಮಾಡಿ ಸದನದಲ್ಲಿ ಎಲ್ಲಾ ಶಾಸಕರು ಭಾಗವಹಿಸುವಂತೆ ಅವಕಾಶ ಕಲ್ಪಿಸಿ ಕೊಟ್ಟಿದ್ದೀರಿ. ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಹಾಗೂ ರಾಜ್ಯ ಸರ್ಕಾರದ ಬಜೆಟ್ ನಿರ್ಣಯದ ಕುರಿತು ಮಾತನಾಡಲು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಶಾಸಕರು ಚರ್ಚೆ ಮಾಡಲು ಸಮಾನ ಅವಕಾಶ ಮಾಡಿಕೊಟ್ಟಿದ್ದು ಅಭಿನಂದನಾರ್ಹ. ಅಲ್ಲದೇ ಪ್ರಥಮ ಬಾರಿಗೆ ಆಯ್ಕೆಯಾದ ಶಾಸಕರಿಗೆ ಅಧಿವೇಶನದಲ್ಲಿ ಮಾತನಾಡಲು ಅವಕಾಶ ನೀಡಿ, ಒಳ್ಳೆಯ ಸಂಸದೀಯ ಪಟುವಾಗಿ ಹೊರಹೊಮ್ಮಲು ಪ್ರೋತ್ಸಾಹ ನೀಡಿದ್ದೀರಿ. ಒಂದೆರಡು ಸಂದರ್ಭದಲ್ಲಿ ಸರ್ಕಾರದ ಸಚಿವರಿಗೆ ಕಟು ಮಾತುಗಳಿಂದ ಅವರ ಕಾರ್ಯವೈಖರಿ ತಿದ್ದಿಕೊಳ್ಳಲು ಸೂಚಿಸಿದ್ದೀರಿ. ಆದರೆ ದಿನಾಂಕ : 20-03-2025 ಮತ್ತು 21-03-2025 ರಂದು ನಡೆಸಿದ ಅಧಿವೇಶನದಲ್ಲಿ ಸರ್ಕಾರದಲ್ಲಿರುವ ಪ್ರಭಾವಿ ಸಚಿವರು ಹಾಗೂ ಮುಖ್ಯಮಂತ್ರಿಗಳ ಆಪ್ತರಾದ ಶ್ರೀ ರಾಜಣ್ಣನವರ ಮೇಲೆ ನಡೆದ ಹನಿ ಟ್ರ್ಯಾಪ್ ಕುರಿತು ಸದನದಲ್ಲಿಯೇ ಅವರು ಒಪ್ಪಿಕೊಂಡಿರುತ್ತಾರೆ. ಆದರೆ ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಗೃಹ ಸಚಿವರು ಹನಿಟ್ರ್ಯಾಪ್ ಕುರಿತು ಯಾವ ರೀತಿಯಲ್ಲಿ ತನಿಖೆ ನಡೆಸುತ್ತೇವೆಂದು ಹೇಳದೇ, ವೇಗವಾಗಿ ಉತ್ತರ ನೀಡಿದ್ದು ವಿರೋಧ ಪಕ್ಷದ ಶಾಸಕರಿಗೆ ಕೋಪ ಬರಲು ಕಾರಣಿ ಭೂತವಾಯಿತು. ತಾವು ವಿಧಾನ ಸಭೆಯ ಅಧ್ಯಕ್ಷರ ಪೀಠದಲ್ಲಿ ಕುಳಿತು ಯಾವ ರೀತಿಯಲ್ಲಿ ತನಿಖೆ ನಡೆಸುತ್ತೀರಿ? ಎಂದು ಸ್ಪಷ್ಟನೆ ಕೇಳಿದ್ದರೆ, ಸರ್ಕಾರದಿಂದ ಸ್ಪಷ್ಟವಾದ ಉತ್ತರ ಸಿಗುತ್ತಿತ್ತು. ತಾವು ವಿರೋಧ ಪಕ್ಷದ ಶಾಸಕರಿಗೆ ಸದನದ ಬಾವಿಗಿಳಿದು ಪ್ರತಿಭಟಿಸುವ ಸಂದರ್ಭದಲ್ಲಿ, ಮುಂದೆ ಬರಲು ಹೇಳಿ, ತದನಂತರ 18 ಜನ ಶಾಸಕರನ್ನು ಆರು ತಿಂಗಳುಗಳ ಕಾಲ ಅಮಾನತು ಮಾಡಿರುತ್ತೀರಿ. ಇದು ಸರಿಯಾದ ಕ್ರಮವಲ್ಲ. ಅಮಾನತು ಆದೇಶವನ್ನು ಒಂದೇ ದಿನಕ್ಕೆ ಮಾಡಿದ್ದರೆ ಸಾಕಾಗುತ್ತಿತ್ತು. ಇತ್ತೀಚೆಗೆ ಎಲ್ಲಾ ಸುದ್ದಿವಾಹಿನಿಯಲ್ಲಿ ಹನಿಟ್ರ್ಯಾಪ್ ವಿಷಯವು Honourly Buried ಎಂಬಂತೆ ಎಲ್ಲಾ ಲಕ್ಷಣಗಳು ಕಾಣತೊಡಗಿವೆ. ನ್ಯಾಯಾಲಯದಲ್ಲಿ ಒಂದು ಅಘೋಷಿತವಾದ ವಾಕ್ಯವಿದೆ ಶಿಕ್ಷೆ ನೀಡುವ ಅಧಿಕಾರಿವಿದ್ದಾಗ, ಕ್ಷಮಾಧಾನಕ್ಕೂ ಸ್ಥಳಾವಕಾಶವಿರುತ್ತದೆ. ಈ ದಿಶೆಯಲ್ಲಿ ತಾವುಗಳು 18 ಜನ ಶಾಸಕರುಗಳ ಅಮಾನತು ಅವಧಿಯನ್ನು ಹದಿನೈದು ದಿನಗಳಿಗೆ ಮೊಟಕುಗೊಳಿಸಿ ಆದೇಶ ನೀಡಿದರೆ ವಿರೋಧ ಪಕ್ಷದ ಶಾಸಕರುಗಳಿಗೆ ತಮ್ಮ ಹಾಗೂ ಪೀಠದ ಗೌರವ ಹೆಚ್ಚಾಗುತ್ತದೆ. ಆದುದರಿಂದ ದಯವಿಟ್ಟು ತಮ್ಮ ನಿರ್ಧಾರವನ್ನು ಪುನರ್ ಪರಿಶೀಲಿಸಲು ಈ ಮೂಲಕ ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆಂದು ಸಿ.ಸಿ.ಪಾಟೀಲರು ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ರಾಜ್ಯದ ತುಂಬೆಲ್ಲಾ ಸ್ಪೀಕರ ವಿರುದ್ಧ ಪ್ರತಿಭಟನೆ ನಡೆಸಿದಾಗಲೂ ಸಹ ಸ್ಪೀಕರ್ ಯು.ಟಿ.ಖಾದರ್ ಮತ್ತು ರಾಜ್ಯ ಕಾಂಗ್ರೆಸ್ ಆಡಳಿತ ಈ ಬಗೆಗೆ ಕಿಂಚಿತ್ತು ಚಿಂತನೆ ಮಾಡದೆ ಇರುವಾಗ ಸಿ.ಸಿ.ಪಾಟೀಲರ ಪತ್ರದಲ್ಲಿಯ ವಿಚಾರಕ್ಕೆ ಸ್ಪೀಕರ್ ಸ್ಪಂದನೆ ಮಾಡುವರಾ..?
© ASK News Kannada. All Rights Reserved. Designed by AGScurate IT Solutions LLP