ಗದಗ, ಮಾ. 29 : ಅನಿಲ ಮೆಣಸಿನಕಾಯಿ ನಿವಾಸದಲ್ಲಿ ಅಖಿಲ ಭಾರತ ಸಮಾನತೆ ಮಂದಿರ ಪ್ರತಿಷ್ಠಾಪನೆ ಮಹಾಸಭಾದಿಂದ ಮಾರ್ಚ 30-2025 ರಂದು ರವಿವಾರ ಮದ್ಯಾಹ್ನ 2 ಗಂಟೆಗೆ ಸಮಾನತೆ ರಥಯಾತ್ರೆ ಸಮಾನತೆ ಬುತ್ತಿ ಪೂರ್ವಭಾವಿ ಸಭೆ ಆಯೋಜಿಸಲಾಗಿದೆ ಎಂದು ಪ್ರತಿಷ್ಠಾನ ತಿಳಿಸಿದೆ. ಈ ಬಗೆಗೆ ಮನವಿ ಮಾಡಿಕೊಂಡಿರುವ ಪ್ರತಿಷ್ಠಾನವು ಪಕ್ಷಾತೀತ, ಜಾತ್ಯಾತೀತ, ಲಿಂಗಭೇದ, ವರ್ಣಬೇದವಾಗಿ ಸರ್ವರು ಸಭೆಯಲ್ಲಿ ಪಾಲ್ಗೊಂಡು ಅಗತ್ಯ ಸಲಹೆ ಸೂಚನೆ ಮಾಗದರ್ಶನ ಮಾಡಬೇಕೆಂದು ಕೋರಿದೆ. *ಮನವಿ ಪತ್ರದಲ್ಲಿ ಏನಿದೆ...* ರಾಮಮಂದಿರ ನಿರ್ಮಾಣ ಭಾರತ ದೇಶದ ಬಹುಸಂಖ್ಯಾತ ಹಿಂದುಗಳ ಬಹು ವರ್ಷಗಳ ಬೇಡಿಕೆಯಾಗಿತ್ತು. ಜನೇವರಿ 22-2024ರಂದು ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೊಂಡು ಈಗಾಗಲೆ ಇತಿಹಾಸದ ಪುಟಗಳಲ್ಲಿ ಸೇರಿದೆ. ವ್ಯಕ್ತಿತ್ವ, ಆದರ್ಶಗಳ ಸಾಕ್ಷಿಯಾಗಿ ಅಯೋಧ್ಯೆಯಲ್ಲಿ ರಾಮಲಲ್ಲಾ ಪ್ರತಿಷ್ಠಾಪನಾಗಿದ್ದಾನೆ. ಅದರಂತೆ ವಿಶ್ವಗುರು ಬಸವಣ್ಣನವರು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳು ಸಮಾಜಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ. ಸಮಾನತೆಯ ಸಂದೇಶ ನೀಡಿ ನೂರಾರು ವರ್ಷಗಳು ಕಳೆದರು ಇದುವರೆಗೆ ಸಮಾಜದಲ್ಲಿ ಅಸಮಾನತೆ, ಲಿಂಗಭೇದ, ವರ್ಣಭೇದ, ಜಾತಿಭೇದ, ತಾರತಮ್ಯ ಎದ್ದು ಕಾಣುತ್ತಿದೆ. ಇಂತಹ ಸಾಮಾಜಿಕ ವ್ಯವಸ್ಥೆಗೆ ಕಡಿವಾಣ ಹಾಕಬೇಕೆಂಬ ಪಣ ತೊಟ್ಟಿರುವ ಅಖಿಲ ಭಾರತ ಸಮಾನತೆ ಮಂದಿರ ಪ್ರತಿಷ್ಠಾನ ಮಹಾಸಭಾ ಸಮಾನತೆಯ ಚಿಂತನೆಗಳನ್ನು ಲೋಕಕ್ಕೆಲ್ಲಾ ಮತ್ತಷ್ಟು ಪರಿಣಾಮಕಾರಿಯಾಗಿ ತಿಳಿಸುವ ಸದುದ್ದೇಶದಿಂದ ಸಮಾನತೆ ಮಂದಿರ ನಿರ್ಮಾಣಕ್ಕೆ ಸಂಕಲ್ಪ ತೊಟ್ಟಿದೆ. ಈ ದಿಶೆಯಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಇಂತಹದೊಂದು ವಿಶಿಷ್ಟ ಯೋಚನೆ, ಯೋಜನೆಗೆ ಅಖಿಲ ಭಾರತ ಸಮಾನತೆ ಮಂದಿರ ಪ್ರತಿಷ್ಠಾಪನೆ ಮಹಾಸಭಾ ಮುಂದಾಗಿದೆ. ಇದಕ್ಕೆ ಪೂರಕವಾಗಿ ಮಹಾನ್ ಮಾನವತಾವಾದಿ ಬಾಬಾಸಾಹೇಬ್ ಅಂಬೇಡ್ಕರ್‌ರವರ ಜನ್ಮದಿನವಾದ ಏಪ್ರಿಲ್ 14ರಿಂದ ಬಸವ ಜಯಂತಿವರೆಗೆ ಸಮಾನತೆ ರಥಯಾತ್ರೆ, ಸಮಾನತೆ ಬುತ್ತಿ ಕಾರ್ಯಕ್ರಮ ಗದಗ ಜಿಲ್ಲೆಯಾದ್ಯಂತ ನಡೆಯಲಿದೆ. ಈ ಸಂದರ್ಭದಲ್ಲಿ ರಾಮ, ಭೀಮ, ಬುದ್ಧ, ಬಸವ, ಕನಕದಾಸರು, ವಾಲ್ಮೀಕಿ, ಸಂತ ಶರೀಫರು ಹೀಗೆ ಅನೇಕ ಮಹನೀಯರ ತತ್ವ, ಆದರ್ಶಗಳ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ. ಈ ಕಾರಣಕ್ಕೆ ಪೂರ್ವಭಾವಿ ಸಭೆಯು ಮಾ.30-2025 ರಂದು ಮದ್ಯಾಹ್ನ 2 ಗಂಟೆಗೆ ಗದಗ ನಗರದಲ್ಲಿರುವ ಅನೀಲ್ ಮೆಣಸಿನಕಾಯಿ ಅವರ ನಿವಾಸದಲ್ಲಿ ಜರುಗಲಿದೆ. ತಮ್ಮ ಸಲಹೆ, ಸಹಕಾರ ತುಂಬಾ ಮುಖ್ಯವಾಗಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ತಾವೆಲ್ಲರೂ ಪಾಲ್ಗೊಂಡು ಸಮಾನತೆಯ ಮಂದಿರಕ್ಕೆ ಕೈ ಜೋಡಿಸಬೇಕೆಂದು ಪ್ರತಿಷ್ಠಾನ ಮನವಿ ಮಾಡುತ್ತದೆ. *ಎಲ್ಲವೂ ಸಮಾನತೆಗಾಗಿ...ಸಮಸಮಾಜ ನಿರ್ಮಾಣಕ್ಕಾಗಿ..* ಹೀಗೆ ಪ್ರತಿಷ್ಠಾನ ಮನವಿ ಮಾಡಿದ್ದು ಸಮಾನತೆಯ ಸಮಮನಸ್ಕರು ಅಸಮಾನತೆಯ ಸಮಾಜವನ್ನು ಸಮಾನತೆಯ ತೊಟ್ಟಿಲಲ್ಲಿ ತೂಗಬೇಕೆಂಬ ಹಂಬಲಕ್ಕೆ ಬೆಂಬಲ ಸಿಗಬಹುದೆ...
© ASK News Kannada. All Rights Reserved. Designed by AGScurate IT Solutions LLP