ಗದಗ, ಮಾ. 29 : ಹೆಂಡತಿಯನ್ನು ಕೊಲೆ ಮಾಡಿದ್ದ ಆರೋಪಿಗೆ ಹತ್ತು ಸಾವಿರ ದಂಡ, ಜೀವಾವಧಿ ಶಿಕ್ಷೆ ವಿಧಿಸಿ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಬಸವರಾಜ ತೀರ್ಪು ನೀಡಿ ಆದೇಶಿಸಿದ್ದಾರೆ. ಈ ಬಗೆಗೆ ಸುದೀರ್ಘ ವಿಚಾರಣೆ ನಡೆಸಿದ ನಂತರ 28-3-2025 ರಂದು ಶುಕ್ರವಾರ ಮೇಲಿನಂತೆ ತೀರ್ಪು ನೀಡಿ ಆದೇಶ ಪ್ರಕಟಿಸಿದೆ. *ಏನಿದು ಪ್ರಕರಣ...?* ದಿನಾಂಕ; 08-12-2004 ರಂದು 12-30 ಗಂಟೆಗೆ ಆರೋಪಿತನಾದ ವೀರಯ್ಯ ತಂದೆ ಶಿವಯ್ಯ ಹಿರೇಮಠ ಸಾ: ಹಿರೇಮಲ್ಲಾಪೂರ, ತಾ: ಶಿರಹಟ್ಟಿ ಈತನು ತನ್ನ ಹೆಂಡತಿಯಾದ ಈರಮ್ಮ ಕೋಂ ವೀರಯ್ಯ ಹಿರೇಮಠ ಇವಳ ಶೀಲದ ಬಗ್ಗೆ ಶಂಕಿಸಿ ತಂಟೆ ಮಾಡಿ, ಅವಳನ್ನು ದೊಡ್ಡ ಹಳ್ಳಕ್ಕೆ ಕರೆದುಕೊಂಡು ಬಂದು, ಆಕೆಯ ತಲೆಗೆ ದೊಡ್ಡ ಕಟ್ಟಿಗೆಯ ಬಡಿಗೆಯಿಂದ ಬಲವಾಗಿ ಹೊಡೆದು ಕೊಲೆ ಮಾಡಿ ಪುರಾವೆ ನಾಶ ಮಾಡುವ ಉದ್ದೇಶದಿಂದ ಶವವನ್ನು ಹಳ್ಳದಲ್ಲಿ ಚೆಲ್ಲಿ ಕಟ್ಟಿಗೆ ಬಡಿಗೆಯನ್ನು ಹಳ್ಳದ ಕಂಟೆಯಲ್ಲಿ ಎಸೆದು ಪರಾರಿಯಾಗಿ ಹೋಗಿದ್ದನೆಂದು ನಮೂದ ಇದ್ದ ಪಿರ್ಯಾಧಿಯನ್ನು ಲಕ್ಷ್ಮೀಶ್ವರ ಪೊಲೀಸ ಠಾಣೆ ಗುನ್ನೆ ನಂಬರ್ 86/2004 ಕಲಂ: 302 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ಮೂಲ ಪಿರ್ಯಾಧಿಯೊಂದಿಗೆ ಮಾನ್ಯ ನ್ಯಾಯಾಲಯಕ್ಕೆ ಕಳಿಸಿಕೊಂಡಿದ್ದಿತ್ತು. ಈ ಪ್ರಕರಣದಲ್ಲಿ ಆರೋಪಿತನು ಗುನ್ನೆ ಲಗಾಯತದಿಂದ ಪರಾರಿ ಇದ್ದು, ದಿನಾಂಕ : 06/04/2006 ರಂದು ಆರೋಪಿತನಿಗೆ ಪರಾರಿ ಎಂದು ತೋರಿಸಿ ದೋಷಾರೋಪಣೆ ಪತ್ರ ತಯಾರಿಸಿ ಮಾನ್ಯ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ಸದರಿ ಪ್ರಕರಣದ ಆರೋಪಿತನು ಸುಮಾರು 16 ವರ್ಷಗಳ ನಂತರ ದಿನಾಂಕ : 05/02/2021 ರಂದು ಸದರಿ ಆರೋಪಿಯನ್ನು ಮಂಗಳೂರು ಪೂರ್ವ ಪೋಲಿಸ್ ಠಾಣೆಯ ವ್ಯಾಪ್ತಿಯ ಮಲ್ಲಿಕಟ್ಟೆಯಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರಪಡಿಸಲಾಗಿತ್ತು. ನಂತರ ಸಾಕ್ಷಿ ವಿಚಾರಣೆ ನಡೆಸಿದ ಗದಗಿನ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಬಸವರಾಜ ಇವರು ಸದರ ಪ್ರಕರಣದಲ್ಲಿ ಆರೋಪ ರುಜುವಾತಾದ ಹಿನ್ನಲೆಯಲ್ಲಿ ಆರೋಪಿತ ವೀರಯ್ಯ ತಂದೆ ನಿಂಗಯ್ಯ ಉರ್ಘ ಶಿವಯ್ಯ ಹಿರೇಮಠ ಇತನಿಗೆ ದಿನಾಂಕ-28-03-2025 ರಂದು ಭಾರತೀಯ ದಂಡ ಸಂಹಿತೆ 302 ರಡಿ ಜೀವಾವಧಿ ಶಿಕ್ಷೆ ಹಾಗೂ 10,000/- ರೂ ದಂಡ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಸದರಿ ಪ್ರಕರಣದಲ್ಲಿ ಗದಗ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಸರಕಾರಿ ಅಭಿಯೋಜಕರಾದ ಶ್ರೀಮತಿ ಸವಿತಾ ಎಂ. ಶಿಗ್ಲಿಯವರು ಸಾಕ್ಷಿ ವಿಚಾರಣೆಯ ನಡೆಸಿ ವಾದವನ್ನು ಮಂಡಿಸಿದ್ದರು.
© ASK News Kannada. All Rights Reserved. Designed by AGScurate IT Solutions LLP