ಗದಗ, ಮೇ. 14 : ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಪ್ರಕ್ಷುಬ್ಧ ವಾತಾವರಣ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಗೃಹ ಇಲಾಖೆಯ ಆದೇಶದಂತೆ ವಿವಿಧ ಇಲಾಖೆಯ ಅಧಿಕಾರಿಗಳ ಸಮನ್ವಯತೆಯಲ್ಲಿ ಅಭ್ಯಾಸ ಕೈಗೊಳ್ಳಲಾಗುತ್ತಿರುವ ಮಾಕ್ ಡ್ರಿಲ್ (ಅಣುಕು ಪ್ರದರ್ಶನ) ಕಾಟಾಚಾರಕ್ಕೆ ನಡೆಸದೆ ಅದರ ಉದ್ದೇಶವನ್ನು ಈಡೇರಿಸುವಂತಾಗಬೇಕೆಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಕಡಕ್ ಸೂಚನೆ ನೀಡಿದರು. ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಜರುಗಿದ ಮಾಕ್ ಡ್ರಿಲ್ ( ಅಣುಕು ಪ್ರದರ್ಶನ) ಕುರಿತ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಾಕ್ ಡ್ರಿಲ್ (ಅಣುಕು ಪ್ರದರ್ಶನ )ವನ್ನು ಗುರುವಾರ (ಮೇ 15 2025 ರಂದು ) ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ಗದಗ ನಗರದಲ್ಲಿ ಆಯೋಜಿಸಲಾಗಿದ್ದು ಈ ಅಣುಕು ಪ್ರದರ್ಶನದಲ್ಲಿ ನಾಗರಿಕ ಸೇವಾ ಇಲಾಖೆಗಳು ಸೇರಿದಂತೆ ವಿವಿಧ ಇಲಾಖೆಗಳ ಸಮನ್ವಯದಿಂದ ತುರ್ತು ಪರಿಸ್ಥಿತಿ ಸಮರ್ಥವಾಗಿ ನಿರ್ವಹಿಸುವ ಬಗ್ಗೆ ಪ್ರಾತ್ಯಕ್ಷಿಕೆ ನಿರ್ವಹಿಸಲಾಗುವುದು. ಸಂಬಂಧಿಸಿದ ಇಲಾಖೆಗಳು ತಮಗೆ ವಹಿಸಿದ ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕೆಂದು ತಿಳಿಸಿದರು. ಈ ಅಣುಕು ಪ್ರದರ್ಶನದಿಂದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಸಂದಿಗ್ಧ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಣೆ ಬಗ್ಗೆ ಇಲಾಖಾ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದಂತಾಗಬೇಕು. ಮುಂಜಾಗ್ರತಾ ಕ್ರಮವಾಗಿ ಈ ಅಣುಕು ಪ್ರದರ್ಶನ ಮಾಡುವ ಮೂಲಕ ಪೂರ್ವಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿ.ಎನ್.ಶ್ರೀಧರ್ ಹೇಳಿದರು. ಜಿಲ್ಲಾ ಪೊಲೀಸ ವರಿಷ್ಟಾಧಿಕಾರಿ ಬಿ.ಎಸ್.ನೇಮಗೌಡ ಮಾತನಾಡಿ ಮಾಕ್ ಡ್ರಿಲ್ (ಅಣುಕು ಪ್ರದರ್ಶನ )ವನ್ನು ಗುರುವಾರ (ಮೇ 15 ರಂದು ) ಸಂಜೆ 4 ಗಂಟೆಯಿಂದ 7 ಗಂಟೆಯವರೆಗೆ ಗದಗ ನಗರದಲ್ಲಿ ಆಯೋಜಿಸಲಾಗುತ್ತಿದೆ. ಮಾಕ್ ಡ್ರಿಲ್ ಮೂಲಕ ವಿವಿಧ ಇಲಾಖೆಗಳು ತಮ್ಮ ಕರ್ತವ್ಯಗಳನ್ನು ನಿಗದಿತ ಸಮಯದಲ್ಲಿ ನಿರ್ವಹಿಸುವ ಬಗ್ಗೆ ಖಚಿತಪಡಿಸಿಕೊಳ್ಳಲಾಗುವುದು ಹಾಗೂ ಅಣುಕು ಪ್ರದರ್ಶನದಲ್ಲಿ ಪರಿಸ್ಥಿತಿ ನಿರ್ವಹಣೆಯಲ್ಲಿ ಆಗುವ ತೊಂದರೆಗಳು ಹಾಗೂ ಲೋಪದೋಷಗಳನ್ನು ಗುರುತಿಸಿ ಸರಿಪಡಿಸಲು ಅವಕಾಶ ದೊರೆತಂತಾಗುತ್ತದೆ. ನಾಗರಿಕ ಸೇವಾ ಇಲಾಖೆ ಸೇರಿದಂತೆ ಎಲ್ಲ ಇಲಾಖೆಗಳಿಗೆ ಹಾಗೂ ಎನ್‌ಎಸ್‌ಎಸ್ , ಎನ್‌ಸಿಸಿ, ರೆಡ್ ಕ್ರಾಸ್, ಮಾಜಿ ಸೈನಿಕರ ತಂಡ, ಸ್ವಯಂ ಸೇವಕರು ಒಟ್ಟಾಗಿ ಅಣುಕು ಪ್ರದರ್ಶನದಲ್ಲಿ ಪಾಲ್ಗೊಂಡು ಜಾಗೃತಿ ಮೂಡಿಸಲು ಮುಂದಾಗಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ ವರಿಷ್ಟಾಧಿಕಾರಿ ಎಂ.ಬಿ.ಸಂಕದ, ಅಪರ ಜಿಲ್ಲಾಧಿಕಾರಿ ಶ್ರೀಮತಿ ಅನ್ನಪೂರ್ಣ ಎಂ, ಜಿ.ಪಂ. ಉಪಕಾರ್ಯದರ್ಶಿ ಸಿ.ಆರ್.ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ, ನಗರಾಬಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಬಸನಗೌಡ ಕೊಟ್ಟೂರ, DYSP ವಿದ್ಯಾನಂದ ನಾಯಕ್, ನಗರಸಭೆ ಪೌರಾಯುಕ್ತ ರಾಜಾರಾಂ ಪವಾರ, DHO ಡಾ. ಎಸ್ ಎಸ್.ನೀಲಗುಂದ, ಡಿಡಿಎಲ್ ಆರ್ ರುದ್ರಣ್ಣ ಗೌಡ ಜಿ.ಜೆ, ಸೇರಿದಂತೆ ಎಲ್ಲ ತಹಶೀಲ್ದಾರರು, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳ ಮುಖ್ಯಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
© ASK News Kannada. All Rights Reserved. Designed by AGScurate IT Solutions LLP