ಲಕ್ಕುಂಡಿ ಜೂ 3 : ಲಕ್ಕುಂಡಿಯಲ್ಲಿ ಬಯಲು ವಸ್ತು ಸಂಗ್ರಹಾಲಯ ರಚಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಲಕ್ಕುಂಡಿಯ ಉದ್ದೇಶಿತ ಬಯಲು ವಸ್ತು ಸಂಗ್ರಹಾಲಯ ಪ್ರದೇಶದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಲಕ್ಕುಂಡಿ ಚಾಲುಕ್ಯರ ರಾಜಧಾನಿ ಆಗಿತ್ತು ಎಂಬುದು ಹೆಮ್ಮೆ ತರುವಂತಹದ್ದು ಎಂದರು. ಸಚಿವ ಎಚ್ಕೆ ಪಾಟೀಲರ ಆಸಕ್ತಿಯಿಂದಾಗಿ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರವನ್ನು ನಮ್ಮ ಸರ್ಕಾರ ರಚಿಸಿದೆ ಎಂದರಲ್ಲದೆ ಚಾಲುಕ್ಯರ ಕಾಲದ ದೇವಸ್ಥಾನ, ಕೋಟೆಗಳನ್ನು ನಿರ್ಮಿಸಿರುವ ಅವಶೇಷಗಳ ಮೂಲಕ ಆ ಕಾಲದ ಶಿಲಾ ಶಾಸನಗಳ ಪರಿಚಯ ಮತ್ತು ರಾಜ್ಯಭಾರದ ಮಾಹಿತಿ ದೊರಕಿದೆ ಎಂದರು. ಇಲ್ಲಿ ದೊರೆತಿರುವ ಅವಶೇಷಗಳ ಪುನರುಜ್ಜೀವನಕ್ಕೆ ಸರ್ಕಾರದಿಂದ ಹಣ ಕೂಡ ಕೊಟ್ಟಿದ್ದು ಇದರಿಂದ ಐತಿಹಾಸಿಕ ಕುರುಹುಗಳನ್ನು ಸಂಗ್ರಹಿಸಲು, ರಕ್ಷಿಸಲು ಸಾಧ್ಯವಾಗಿದೆ ಎಂದರು. ಪ್ರಾಚ್ಯಾವಶೇಷಗಳು ದೊರೆತ ಸ್ಥಳದ ಜಾಗ ಮತ್ತು ಮನೆಗಳನ್ನು ಸರ್ಕಾರಕ್ಕೆ ಹಸ್ತಾಂತರಿಸಿದವರಿಗೆ ಧನ್ಯವಾದ ಅರ್ಪಿಸಿದರು. *ಕಾನೂನು ಉಲ್ಲಂಘಿಸಿದವರ ವಿರುದ್ಧ ಕಾನೂನಿನ ಪ್ರಕಾರ ಕ್ರಮ: ಕಾನೂನು ಉಲ್ಲಂಘಿಸಿ ಧರ್ಮದ ಹೆಸರು ಹೇಳಬಾರದು* ರಾಜ್ಯದ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಯಾರೇ ಆದರೂ, ಎಷ್ಟೇ ಪ್ರಭಾವಿ ಆದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಕಾನೂನು ಉಲ್ಲಂಘಿಸಿ ಕ್ರಿಮಿನಲ್ ಕೆಲಸ ಮಾಡೋದು ಬಳಿಕ ಧರ್ಮದ ಹೆಸರು ಹೇಳುವುದು ತಪ್ಪಲ್ಲವೇ ಎಂದು ಪ್ರಶ್ನಿಸಿದರು.
© ASK News Kannada. All Rights Reserved. Designed by AGScurate IT Solutions LLP