ಅಪ್ಪ ಎಂಬ ಪದ ಅದ್ಭುತ ಶಕ್ತಿ, ಭರವಸೆಯ ಪ್ರತೀಕ, ದೈರ್ಯದ ಸಂಖೇತ, ಹೀಗಾಗಿ ಅಪ್ಪ ಅಂದ್ರೆ ಮಕ್ಕಳಿಗೆ ಅಪ್ಪುಗೆ. ಆದರೆ ಭಾರತದ ಸಾಮಾಜಿಕ, ಕೌಟುಂಬಿಕ ವ್ಯವಸ್ಥೆಯಲ್ಲಿ ತಾಯಿಗೆ ಸಿಕ್ಕಷ್ಟು ಪ್ರಾಶಸ್ತ್ಯ ತಂದೆಗಿಲ್ಲ ಎಂಬುದು ಸತ್ಯ. ಕಾರಣ ಜನನಿ ತಾನೆ ಮೊದಲು ಗುರು ಅಂದ್ರೆ ತಾಯಿಯೇ ಮೊದಲ ಗುರು ಎಂದರ್ಥ. ಹೀಗಾಗಿ ಅಪ್ಪನಿಗೆ ಭರವಸೆಯ ಅಪ್ಪುಗೆಗೆ ಸೀಮಿತ. ತಾಯಿಯ ವಾತ್ಸಲ್ಯಕ್ಕೆ ಸಿಗುವ ಮಾನ್ಯತೆ ಅಪ್ಪನ ತ್ಯಾಗಕ್ಕೆ ಇಲ್ಲ ಎನ್ನುವ ತರ್ಕ ಸುಳ್ಳಲ್ಲ. ಆದರೆ ಇದಕ್ಕೆ ತಲೆ ಕೆಡಿಸಿಕೊಳ್ಳದಿರುವ ತಂದೆ ಅಥವಾ ಅಪ್ಪ ತನ್ನ ಜವಾಬ್ದಾರಿ ಅರಿತು ಸಾಗುತ್ತಿರುತ್ತಾನೆ. ತಾಯಿಯಷ್ಟೇ ಕುಟುಂಬದ ಜವಾಬ್ದಾರಿ ಹೊತ್ತು ಸಾಗುವ ತಂದೆಗೂ ಪ್ರಾಮುಖ್ಯತೆ ಕೊಡಬೇಕೆಂಬ ಉದ್ದೇಶದಿಂದ ಪ್ರತಿ ವರ್ಷ ಜೂನ್ ಮೂರನೇ ಭಾನುವಾರ ವಿಶ್ವ ಅಪ್ಪಂದಿರ ದಿನವನ್ನು ಆಚರಿಸಲಾಗುತ್ತದೆ. ಅಪ್ಪಂದಿರ ದಿನವನ್ನು ಪ್ರಥಮ ಬಾರಿಗೆ 19-6-1910ರಲ್ಲಿ ಅಮೆರಿಕದ ವಾಷಿಂಗ್ಟನ್‌ನಲ್ಲಿ ಆಚರಿಸಲಾಯಿತು. 1916ರಲ್ಲಿ ಅಮೆರಿಕ ಅಧ್ಯಕ್ಷ ವುಡ್ರೋ ವಿಲ್ಸನ್ ತಂದೆಯ ಸೇವೆಗಳನ್ನು ಸ್ಮರಿಸಿ ಎಲ್ಲ ತಂದೆಯಂದಿರಿಗೂ ಶುಭಾಶಯ ಕೊರುತ್ತಾರೆ. 1966ರಲ್ಲಿ ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಜೂನ್ ಮೂರನೇ ಭಾನುವಾರವನ್ನು ವಿಶ್ವ ಅಪ್ಪಂದಿರ ದಿನವೆಂದು ಘೋಷಣೆ ಮಾಡಿ ಸಹಿ ಹಾಕುವ ಮೂಲಕ ಅಧಿಕೃತವಾಗಿ ಅಪ್ಪಂದಿರ ದಿನವನ್ನು ಜಾರಿಗೊಳಿಸುತ್ತಾರೆ. ಮೊದಲಿಗೆ 1908ರ ಜುಲೈ 5ರಂದು ಪಶ್ಚಿಮ ವರ್ಜೀನಿಯಾದಲ್ಲಿ ಮೊನೊಂಗಾ ಗಣಿ ದುರಂತದಲ್ಲಿ ಸಾವನಪ್ಪಿದ ಅಪ್ಪಂದಿರ ಸೇವೆಗಳನ್ನು ಸ್ಮರಿಸಲು ಅಪ್ಪಂದಿರ ದಿನ ಆಚರಿಸಲಾಗುತ್ತಿತ್ತು. ಅಪ್ಪಂದಿರ ದಿನಕ್ಕೆ ನಿಜವಾದ ಅರ್ಥ ತಂದು ಕೊಟ್ಟವರಲ್ಲಿ ಸೋನೋರಾ ಲೂಯಿಸ್ ಸ್ಮಾರ್ಟ್ ಒಬ್ಬರಾಗಿದ್ದಾರೆ. ಸೋನೋರಾ 1882ರಲ್ಲಿ ಅಮೆರಿಕದ ಅರ್ಕಾನ್ಸಾಸ್ ಎಂಬಲ್ಲಿ ಜನಿಸಿದರು. ಸೋನೋರಾ ಏಳು ವರ್ಷದವಳಿದ್ದಾಗ ಇವರ ಕುಟುಂಬ ಪೂರ್ವ ಸ್ಪೋಕೇನ್‌ಗೆ ಸ್ಥಳಾಂತರಗೊಂಡಿತು. 16 ವರ್ಷ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಸೋನೋರಾ ಇಡೀ ಕುಟುಂಬದ ಜವಾಬ್ದಾರಿ ಹೊರುತ್ತಾಳೆ. ಸೋನೋರಾಗೆ ಐದು ಜನ ಸಹೋದರರಿದ್ದು ಅವರ ಕುಟುಂಬಕ್ಕೆ ಆಸರೆಯಾಗಿ ಸೋನೋರಾ ತಂದೆ ವಿಲಿಯಂ ಜಾಕ್ಸನ್ ಸ್ಮಾರ್ಟ್ ನಿಲ್ಲುತ್ತಾರೆ. ತಾಯಂದಿರ ಸೇವೆ ಕುರಿತು ಚರ್ಚ್‌ವೊಂದರಲ್ಲಿ ಉಪದೇಶ ಕೇಳಿದ ನಂತರ ಸೋನೋರಾಗೆ ಅಪ್ಪನಿಗೂ(ತಂದೆ) ಮಾನ್ಯತೆ ಸಿಗಬೇಕಾದ ಅವಶ್ಯಕತೆ ಇದೆ ಎಂದು ಅನಿಸುತ್ತದೆ. ಇದರಿಂದ ಈ ಬಗೆಗೆ ಕಾರ್ಯಪ್ರವೃತಳಾದ ಸ್ಪೋಕೇನ್‌ನ ಸಚಿವಾಲಯವನ್ನು ಸಂಪರ್ಕಿಸಿ ಈ ವಿಷಯದ ಬಗ್ಗೆ ಚರ್ಚಿಸುತ್ತಾಳೆ. ತನ್ನ ತಂದೆ ಹುಟ್ಟಿದ ದಿನಾಂಕ ಜೂನ್ 5ರಂದು ತಂದೆಯ ದಿನವನ್ನಾಗಿ ಆಚರಿಸುವಂತೆ ಸೂಚಿಸುತ್ತಾರೆ. ತದನಂತರ ಜೂನ್ ಮೂರನೇ ಭಾನುವಾರ ಅಪ್ಪಂದಿರ ದಿನ ಆಚರಿಸಲಾಗುತ್ತದೆ. ಭಾರತದಲ್ಲಿ ಪ್ರತಿ ವರ್ಷ ಜೂನ್ ತಿಂಗಳ ಮೂರನೇ ಭಾನುವಾರದಂದು ತಂದೆಯರ ದಿನವಾಗಿ (ಪಾದರ್ಸ್ ಡೇ) ಆಚರಿಸಲಾಗುತ್ತದೆ. ಮಕ್ಕಳಿಗೆ ಗಾಯವಾದರೆ ಅದಕ್ಕೆ ಬ್ಯಾಂಡೇಜ್ ಹಾಕೊದು ತಾಯಿಯೇ ಆದರೂ, ಆ ಬ್ಯಾಂಡೇಜ್ ತಂದು ಮಕ್ಕಳ ಬಗೆಗೆ ಕಾಳಜಿ ತೋರಿಸೊದು ಅಪ್ಪನೆ ಎಂಬುದು ಸುಳ್ಳಲ್ಲ. ತನ್ನ ಜವಾಬ್ದಾರಿಯನ್ನು ಪೂರೈಸುತ್ತಲೇ ಮಕ್ಕಳ ಶ್ರೇಯೋಭಿವೃದ್ಧಿಗೆ ಹಗಲಿರುಳು ದುಡಿಯುವ ಶ್ರಮಜೀವಿ ಅಂದ್ರೆ ಅಪ್ಪ. ಪ್ರತಿಯೊಬ್ಬ ಮಕ್ಕಳಿಗೆ ತನ್ನ ಅಪ್ಪನೇ ಮೊದಲ ಹೀರೋ, ಅಪ್ಪ ಜೊತೆಯಲ್ಲಿದ್ದರೆ ಜಗತ್ತಲ್ಲಿ ಏನು ಬೇಕಾದರೂ ಸಾಧಿಸಬಲ್ಲೇ ಎಂಬ ವಿಶ್ವಾಸವಿರುತ್ತದೆ. ಪ್ರೀತಿ, ವಾತ್ಸಲ್ಯದ ಸ್ಥಾನ ಅಮ್ಮನಿಗಾದರೆ, ಸ್ನೇಹ, ಅಕ್ಕರೆಯ ಪ್ರತಿರೂಪ ಅಂದ್ರೆ ಅಪ್ಪನೇ. ತನ್ನ ಜೀವ ಮತ್ತು ಜೀವನವನ್ನೇ ಕುಟುಂಬಕ್ಕಾಗಿ ಮುಡಿಪಾಗಿಡುವ. ತನ್ನೆಲ್ಲಾ ಸುಖವನ್ನು ಮಕ್ಕಳಿಗಾಗಿ ಮೀಸಲಿಡುವ ನಿಜವಾದ ಹೀರೋ ಅಂದ್ರೆ ಅಪ್ಪ. *ಅಮ್ಮಂದಿರ ದಿನಕ್ಕಿರುವಷ್ಟು ಜನಪ್ರಿಯತೆ ಅಪ್ಪಂದಿರ ದಿನಕ್ಕಿಲ್ಲವಲ್ಲ..?* ಪ್ರತಿ ವರ್ಷ ಮೇ ಎರಡನೇ ಭಾನುವಾರ ವಿಶ್ವ ಅಮ್ಮಂದಿರ ದಿನವೆಂದು ಆಚರಿಸಲಾಗುತ್ತಿದ್ದು ಇತ್ತೀಚೆಗೆ ಅಪ್ಪಂದಿರ ದಿನವನ್ನು ಎಲ್ಲೆಡೆ ಆಚರಿಸಲಾಗುತ್ತದೆ. ಆದರೆ ಮೊದಲೆಲ್ಲ ಅಪ್ಪಂದಿರ ದಿನ ಆಚರಣೆಯಲ್ಲಿದ್ದರೂ ಅಮ್ಮಂದಿರ ದಿನಕ್ಕಿರುವಷ್ಟು ಮಹತ್ವ, ಜನಪ್ರಿಯತೆ ಅಪ್ಪಂದಿರ ದಿನಾಚರಣೆ ಆಚರಣೆ ಗಳಿಸಲಿಲ್ಲ. ಭಾರತೀಯ ಸಮಾಜದಲ್ಲಿ ತಾಯಿಗೆ ಹೆಚ್ಚು ಪ್ರಾಮುಖ್ಯತೆ ಇರುವ ಕಾರಣ ಅಪ್ಪಂದಿರ ದಿನಕ್ಕೆ ಮಹತ್ವ ಬರುತ್ತಿಲ್ಲ ಎಂಬ ವಾದ ಇದೆ. ಅಪ್ಪಂದಿರ ದಿನಕ್ಕೆ ಮಹತ್ವ ಸಿಗದೆ ಇರಲು ಅಪ್ಪನೆ ಕಾರಣ ಎನ್ನಲಾಗುತ್ತಿದೆ. ಇದು ಹೇಗೆ ಅಂದ್ತೆ ಉಡುಗೊರೆ, ಹೂಗುಚ್ಚ ಪಡಯಲು, ವಿಜೃಂಭಣೆಯಿಂದ ಆಚರಿಸುವಲ್ಲಿ ಅಪ್ಪಂದಿರಿಗೆ ಆಸಕ್ತಿ ಕಡಿಮೆಯಿರುವುದು ಕೂಡ ಒಂದು ಕಾರಣವಾಗಿದೆ. ಹೀಗಾಗಿ ಬಹುತೇಕ ಮಕ್ಕಳು ಅಪ್ಪಂದಿರ ದಿನದಂದು ಅಪ್ಪನ ಫೋಟೋ ವನ್ನು ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿಕೊಳ್ಳುವ ಮೂಲಕ ಫಾದರ್ಸ ಡೇ ಆಚರಿಸುತ್ತಿದ್ದಾರೆ. ಆಚರಣೆ ದಿನ ಅಮ್ಮಂದೆ ಆಗಿರಲಿ ಅಪ್ಪಂದೆ ಆಗಿರಲಿ ಅಪ್ಪ - ಅಮ್ಮ ಕುಟುಂಬ ಎಂಬ ರಥದ ಎರಡು ಗಾಲಿಗಳು, ಮಕ್ಕಳ ರಕ್ಷಣೆಯ ಎರಡು ಕಣ್ಣುಗಳು, ಮಕ್ಕಳ ಭವಿಷ್ಯಕ್ಕೆ ಮನ ಮಿಡಿಯುವ ಎರಡು ಹೃದಯಗಳು, ಮಕ್ಕಳ ಬದುಕಿನ ಪ್ರೀತಿಯ ಅಪ್ಪುಗೆಗಳು.
© ASK News Kannada. All Rights Reserved. Designed by AGScurate IT Solutions LLP