ask-banner
ad-banner
ರಾಜ್ಯ 2025-06-26

ಶೇರ್ ಮಾಡಿ  

*ನಿಮ್ಮ ತಪ್ಪುಗಳಿಂದ ಸರ್ಕಾರಕ್ಕೆ ಮುಜುಗುರ...* *ಪರಿಣಾಮಕಾರಿ ವಾದ ಮಂಡನೆ ಮಾಡದೆ ಇದ್ದರೆ ನಿಮ್ಮ ಬದಲಾವಣೆ ಅನಿವಾರ್ಯ : ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಳಿಗೆ ಸಿಎಂ ಕಡಕ್ ವಾರ್ನ...*

ಬೆಂ, ಜೂ. 26 : ನೀವು ಮಾಡುವ ತಪ್ಪುಗಳಿಂದಾಗಿ ಸರ್ಕಾರ ಮುಜುಗುರ ಅನುಭವಿಸುತ್ತದೆ ಎಂದು ಸಿಎಂ ಸಿದ್ರಾಮಯ್ಯ ಬೇಸರ ವ್ಯಕ್ತಪಡಿಸಿದರಲ್ಲದೆ ಪರಿಣಾಮಕಾರಿ ವಾದ ಮಂಡನೆ ಮಾಡದೆ ಇದ್ದವರನ್ನು ಬದಲಾವಣೆ ಮಾಡುವುದು ಅನಿವಾರ್ಯ ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಗಳಿಗೆ ಸಿಎಂ ಕಡಕ್ ಎಚ್ಚರಿಕೆ ನೀಡಿದರು. ಅವರು ಗುರುವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆಸಿದ ಪ್ರಗತಿ ಹೆಚ್ಚುವರಿ ಅಡ್ವೊಕೇಟ್ ಜನರಲ್‌ಗಳ ಕಾರ್ಯನಿರ್ವಹಣಾ ಸಭೆಯಲ್ಲಿ ಮಾತನಾಡಿ ಸರ್ಕಾರದ ಪರವಾಗಿ ಸಮರ್ಪಕವಾಗಿ ವಾದ ಮಾಡಲು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದ್ದರು ಪ್ರಕರಣಗಳು ಸರ್ಕಾರದ ಪರವಾಗುತ್ತಿಲ್ಲ ಏಕೆ..? ಎಂದು ಪ್ರಶ್ನಿಸಿದರು. ಸರ್ಕಾರದ ಕಾನೂನುಗಳನ್ನು ಎಲ್ಲಾ ಹಂತಗಳಲ್ಲಿ ಎತ್ತಿ ಹಿಡಿಯುವುದು ನಿಮ್ಮ ಜವಾಬ್ದಾರಿ ಎಂದರಲ್ಲದೆ ಕರ್ನಾಟಕ ರಾಜ್ಯ ಅಧಿನಿಯಮಗಳ ಸಂಪೂರ್ಣ ಅನುಷ್ಠಾನ, ಉದ್ದೇಶದ ನಿರ್ವಹಣೆ ನಿಮ್ಮ ಕೈಯಲ್ಲಿದೆ ಎಂದರು. ನೀವೆಲ್ಲ ಹಿರಿಯ ನ್ಯಾಯವಾದಿಗಳಿದ್ದು ಸರ್ಕಾರದ ಆದ್ಯತೆಗಳನ್ನು ಕಾಪಾಡುವುದು ನಿಮ್ಮೆಲ್ಲರ ಹೊಣೆಗಾರಿಕೆಯಾಗಿದ್ದು ಇದರಲ್ಲಿ ನಿರ್ಲಕ್ಷ್ಯ ತೋರಿದರೆ ಯಾವುದೇ ಕಾರಣಕ್ಕೂ ಸಹಿಸಲಾಗದು ಎಂದರು. ಪರಿಣಾಮಕಾರಿ ವಾದ ಮಂಡಿಸದ ಕಾರಣದಿಂದ ನಾವು ಹಲವು ಪ್ರಕರಣಗಳಲ್ಲಿ ಹಿನ್ನಡೆ ಅನುಭವಿಸುತ್ತಿದೆಯಲ್ಲದೆ ಸರ್ಕಾರಕ್ಕೆ ಅನುಕೂಲಕರವಾದ ಕೇಸ್‌ಗಳಲ್ಲಿಯೂ ಸಹ ಸರ್ಕಾರದ ಪರವಾಗಿ ಆದೇಶಗಳು ಬರುತ್ತಿಲ್ಲ ಯಾಕೆ..? ಎಂದು ಖಾರವಾಗಿ ಪ್ರಶ್ನಿಸಿದರು. ಅನೇಕ ಪ್ರಕರಣಗಳಲ್ಲಿ ಸರ್ಕಾರದ ವಿರುದ್ಧ ಯಾಕೆ ಸುಲಭವಾಗಿ ತಡೆಯಾಜ್ಞೆ ದೊರೆಯುತ್ತದೆ..? ತಡೆಯಾಜ್ಞೆಯನ್ನು ವರ್ಷಗಟ್ಟಲೆ ತೆರವುಗೊಳಿಸದೆ ಇಡುವ ಪ್ರಕರಣಗಳು ಯಾಕೆ ಹೆಚ್ಚಾಗುತ್ತಿವೆ..? ಎಂದು ಪ್ರಶ್ನಿಸಿದ ಸಿಎಂ ಸರ್ಕಾರದ ವಿರುದ್ಧದ ತಡೆಯಾಜ್ಞೆ ಪ್ರಕರಣಗಳನ್ನು ಆದಷ್ಟು ಬೇಗನೆ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸೂಚನೆ ನೀಡಿದರು. ನಿವೇಲ್ಲ ವಾದ ಮಂಡನೆಗೆ ತೆರಳುವಾಗ ಸಂಪೂರ್ಣ ಸಿದ್ಧತೆಯೊಂದಿಗೆ ನ್ಯಾಯಾಲಯದ ಕಲಾಪಗಳಲ್ಲಿ ಭಾಗವಹಿಸಬೇಕೆಂದರಲ್ಲದೆ ಮೆರಿಟ್‌ ಇರುವ ಪ್ರಕರಣಗಳಲ್ಲಿ ಸರ್ಕಾರಕ್ಕೆ ಹಿನ್ನಡೆಯಾಗಲು ಅವಕಾಶ ಕೊಡಬೇಡಿ ಎಂದರು. ಪ್ರತಿಯೊಂದು ಪ್ರಕರಣಗಳನ್ನು ಸವಾಲಾಗಿ ಸ್ವೀಕರಿಸಿ ಕಾರ್ಯ ನಿರ್ವಹಿಸಿದ್ದೆ ಆದರೆ ಸರ್ಕಾರಕ್ಕೆ ಉತ್ತಮ ಹೆಸರು ಬರಲು ಸಾಧ್ಯವಿದ್ದು ನಿಮ್ಮಿಂದ ಹೆಚ್ಚಿನ ಕ್ರಿಯಾಶೀಲ ಕಾರ್ಯನಿರ್ವಹಣೆಯನ್ನು ಸರ್ಕಾರ ಅಪೇಕ್ಷಿಸುವಂತಹ ಪರಿಸ್ಥಿತಿ ಬಂದಿದೆ ಎಂದರು. ಇಲಾಖೆಗಳಿಂದ ಅಥವಾ ಅಧಿಕಾರಿಗಳಿಂದ ಸರಿಯಾಗಿ ಸ್ಪಂದನೆ ದೊರೆಯದಿದ್ದರೆ ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರಬೇಕೆಂದರಲ್ಲೆ ಎಲ್ಲಾ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳಿಗೆ ಇಲಾಖಾವಾರು ಕಾರ್ಯಕ್ಷೇತ್ರವನ್ನು ನಿಗದಿಪಡಿಸಬೇಕೆಂದರು. ನ್ಯಾಯಾಂಗದಲ್ಲಿನ ಎಲ್ಲಾ ಅಡ್ಡಿಗಳನ್ನು ನಿವಾರಿಸುವ ನಿಟ್ಟಿನಲ್ಲಿ ಇನ್ನಷ್ಟು ಕ್ರಿಯಾ ಶೀಲರಾಗಿ ಕಾರ್ಯನಿರ್ವಹಿಸಿ ರಾಜ್ಯ ಸರ್ಕಾರದ ಪರವಾದ ನ್ಯಾಯಾಂಗ ಹೋರಾಟಗಳನ್ನು ಇನ್ನಷ್ಟು ವೃತ್ತಿಪರಗೊಳಿಸುವುದು ಅಗತ್ಯವಿದೆ ಎಂದರು. • ರಾಜ್ಯ ಸರ್ಕಾರದ 21,799 ಪ್ರಕರಣಗಳು ಹೈಕೋರ್ಟ್ನಲ್ಲಿ ಬಾಕಿಯಿದ್ದು ಇದರಲ್ಲಿ 5,016 ಪ್ರಕರಣಗಳಲ್ಲಿ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ತ್ವರಿತವಾಗಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕೆಂದರು. ಎಲ್ಲಾ ಹೆಚ್ಚುವರಿ ಅಡ್ವೊಕೇಟ್ ಜನರಲ್‌ ಗಳ ಸಭೆಯನ್ನು ಕರೆದು ಸಮನ್ವಯತೆಯಿಂದ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಕಾರ್ಯದರ್ಶಿಯವರಿಗೆ ಸಿಎಂ ಸೂಚಿಸಿದರು. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್.ಕೆ.ಪಾಟೀಲ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್‌ ಅಹ್ಮದ್, ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ಅಡ್ವೊಕೇಟ್‌ ಜನರಲ್ ಶಶಿಕಿರಣ್ ಶೆಟ್ಟಿ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಮುಖ್ಯಮಂತ್ರಿ ಅವರ ಅಪರ ಮುಖ್ಯ ಕಾರ್ಯದರ್ಶಿ ಅಂಜುಂ ಪರ್ವೇಜ್, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ಗಳು ಸೇರಿ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

Anant S. Karkal
ವೀಕ್ಷಣೆ 232

ಜನಪ್ರಿಯ ಸುದ್ದಿಗಳು

ಕಚೇರಿ ವಿಳಾಸ

Gadag - 582101

ಫೋನ್ ನಂ.

+91 9448302002

ಇಮೇಲ್ ಐಡಿ

asknewskannada@gmail.com

ಸೋಶಿಯಲ್ ಮೀಡಿಯಾ ಲಿಂಕ್ಸ್

© ASK News Kannada. All Rights Reserved. Designed by AGScurate IT Solutions LLP