ಗದಗ, ಜು, 21 : ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಮಾನವ ಹಕ್ಕುಗಳಾಗಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದು ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರ, ನ್ಯಾಯ ಮತ್ತು ಮಾನವ ಹಕ್ಕುಗಳು, ಪ್ರವಾಸೋದ್ಯಮ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್ಕೆ ಪಾಟೀಲ ಹೇಳಿದರು. ನಗರದ ಮಹಾತ್ಮ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ ರಾಜ್ ವಿಶ್ವವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಕವಲು ದಾರಿಯಲ್ಲಿ ಮಾನವ ಹಕ್ಕುಗಳು, ಭಾರತ ಹಾಗೂ ಪಶ್ಚಿಮ ವಿಷಯ ಕುರಿತ ಅಂತರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರ ಜಾರಿಗೆ ತಂದ ಪಂಚ ಗ್ಯಾರಂಟಿ ಯೋಜನೆಗಳನ್ನು ಸಂವಿಧಾನಾತ್ಮಕವಾಗಿ ಮಾನವ ಹಕ್ಕುಗಳನ್ನಾಗಿ ಮಾಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದ್ದು ಇದರಿಂದ ಪ್ರತಿಯೊಬ್ಬರೂ ಸಮಾಜದಲ್ಲಿ ಗೌರವಯುತ ಜೀವನ ನಡೆಸಲು ಸಾಧ್ಯವಾಗಲಿದೆ ಎಂದರು. ಬಡತನ ಎಲ್ಲಿವರೆಗೂ ಇರುತ್ತದೆಯೋ ಅಲ್ಲಿಯವರೆಗೂ ಮಾನವ ಹಕ್ಕುಗಳಿಗೆ ಬೆಲೆ ಇಲ್ಲದಂತಾಗುತ್ತದೆ ಎಂದರಲ್ಲೆ ಸರ್ಕಾರ ರಾಜ್ಯದಲ್ಲಿ ಪಂಚಗ್ಯಾರಂಟಿ ಜಾರಿ ತರುವ ಮೂಲಕ ಬಡತನ ನಿರ್ಮೂಲನೆ ಮಾಡಿರುವ ಜೊತೆಗೆ ಮಾನವ ಹಕ್ಕುಗಳ ರಕ್ಷಣೆ ಮತ್ತು ಬಲವರ್ಧನೆಗೆ ಪೂರಕವಾಗಿಸಲು ಗ್ಯಾರಂಟಿಗಳು ಸಾಧ್ಯವಾಗಿವೆ ಎಂದರು. ಕಾನೂನು ನಿಯಮಗಳು, ಆಡಳಿತಾತ್ಮಕ ವಿಷಯ, ಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಮಾನವ ಹಕ್ಕುಗಳ ರಕ್ಷಣೆ ಜಾಗೃತಿಗಾಗಿ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಾದ ಅಗತ್ಯವಿದೆ ಎಂದರು. 1993 ರಲ್ಲೇ ಮಾನವ ಹಕ್ಕುಗಳ ಆಯೋಗ ರಚನೆ ಮಾಡಲಾಗಿತ್ತು. ಆದರೆ, 2003 ರವರೆಗೂ ನಿಯಮಾವಳಿಗಳೇ ರಚನೆ ಆಗದೇ ದೇಶದ ಯಾವುದೇ ರಾಜ್ಯದಲ್ಲಿ ಮಾನವ ಹಕ್ಕುಗಳು ಜಾರಿ ಆಗಲಿಲ್ಲ. 2003 ರಲ್ಲಿ ರಾಜ್ಯ ಸರ್ಕಾರ ನಿಯಮಾವಳಿ ರಚನೆ ಮಾಡಿ ಜಾರಿ ಮಾಡಿದ ಮೊದಲ ರಾಜ್ಯವಾಗಿದ್ದು ಕರ್ನಾಟಕ ಎಂಬ ಹೆಮ್ಮೆ ನಮಗಿದೆ ಎಂದರು. ಕರ್ನಾಟಕ ರಾಜ್ಯದಲ್ಲಿ ಮಾನವ ಹಕ್ಕುಗಳ ನ್ಯಾಯಾಲಯವನ್ನು ಸ್ಥಾಪಿಸಿ, ಮಾನವ ಹಕ್ಕುಗಳ ರಕ್ಷಣೆಗೆ ಮುಂದಾಗಿ ಹಕ್ಕುಗಳ ಉಲ್ಲಂಘನೆಗಳನ್ನು ತಡೆದು ಮೂಲಭೂತ ಹಕ್ಕುಗಳ ರಕ್ಷಣೆಯೇ ನ್ಯಾಯಾಲಯ ಉದ್ದೇಶವಾಗಿದೆ. ಕಾಲ ಕಾಲಕ್ಕೆ ಮಾನವ ಹಕ್ಕುಗಳು ಬದಲಾವಣೆಯಾಗಿವೆ. ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುನ್ನು ಹಕ್ಕುಗಳ ಮೂಲಕ ನೀಡಲಾಗಿದೆ. ಅದರಂತೆ ಶೈಕ್ಷಣಿಕ ಹಕ್ಕು, ಜೀವಿಸುವ ಹಕ್ಕು, ಆರೋಗ್ಯದ ಹಕ್ಕುಗಳನ್ನು ನೀಡಲಾಗಿದೆ ಎಂದು ತಿಳಿಸಿದರು. ನಾಗರಿಕ ಸಮಾಜ ನಿರ್ಮಾಣದಲ್ಲಿ ಜನರ ಮೂಲಭೂತ ಹಕ್ಕುಗಳ ಮಹತ್ವ ಸಾರಬೇಕಿದೆ. ಮಾನವ ಹಕ್ಕುಗಳ ಪಾಲನೆಯಿಂದ ಸಾಮಾಜಿಕ ಕ್ರಾಂತಿ ಜರುಗಿದೆ ಎಂದು ಮಾನವ ಹಕ್ಕುಗಳ ಸಚಿವ ಎಚ್.ಕೆ. ಪಾಟೀಲ ಹೇಳಿದರು. ಕಾನೂನು ಆಯೋಗದ ಅಧ್ಯಕ್ಷ ಡಾ. ಅಶೋಕ ಇಂಚಿಗೇರಿ, ಕಾನೂನು ಆಯೋಗದ ಸದಸ್ಯ ಎ.ಜೆ. ನಿಜಗಣ್ಣವರ, ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸಿ. ಬಸವರಾಜ, ಕಾನೂನು ಮತ್ತು ಸಂಸದೀಯ ಸುಧಾರಣೆ ಸಂಸ್ಥೆ ನಿರ್ದೇಶಕ ಸಿ. ಎಸ್. ಪಾಟೀಲ, ಕಾನೂನು ಆಯೋಗದ ಸದಸ್ಯ ಕಾರ್ಯದರ್ಶಿ ಧರ್ಮಗೌಡರ, ಬೆಂಗಳೂರು ಕಾನೂನು ಕಾಲೇಜಿನ ಪ್ರಾಂಶುಪಾಲ ಪ್ರೊ. ಎನ್. ದಶರಥ, ಮಹಾತ್ಮಾ ಗಾಂಧಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿ.ವಿ. ಕುಲಸಚಿವ ಡಾ. ಎಸ್.ವಿ. ನಾಡಗೌಡರ, ವಿತ್ತಾಧಿಕಾರಿ ಪ್ರಶಾಂತ ಜೆ.ಸಿ ಉಪಸ್ಥಿತರಿದ್ದರು.
© ASK News Kannada. All Rights Reserved. Designed by AGScurate IT Solutions LLP