ಗದಗ, ಸೆ, 1 : ಹಿಂದೂ ವಿರೋಧಿ ಹೇಳಿಕೆ, ಕನ್ನಡ ತಾಯಿ ಭುವನೇಶ್ವರಿ ವಿರುದ್ಧ ಮಾತನಾಡಿ ತಮ್ಮ ವ್ಯಕ್ತಿತ್ವ ಎಂತಹದು ಎಂಬುದನ್ನು ತೋರ್ಪಡಿಸಿರುವ ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆಯಿಂದ ಕೈ ಬೀಡಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಪದಾಧಿಕಾರಿಗಳು ಗದಗ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳನ್ನು ಆಗ್ರಹಿಸಿದ್ದಾರೆ. ರಾಣಿ ಚಂದಾವರಿ, ಮಂಗಳಾ ಬೇಲೇರಿ ಸೇರಿದಂತೆ ಗದಗ ಜನಜಾಗೃತಿ ಸಮಿತಿ ಪದಾಧಿಕಾರಿಗಳು ಜಿಲ್ಲಾಡಳಿತ ಭವನಕ್ಕೆ ತೆರಳಿ ಜಿಲ್ಲಾಕಾರಿಗಳಿಗೆ ಮನವಿ ಸಲ್ಲಿಸಿ ಮೈಸೂರು ದಸರಾ ಉದ್ಘಾಟನೆಗೆ ಭಾನು ಮುಸ್ತಾಕ ಅವರನ್ನು ಆಹ್ವಾನಿಸಿರುವ ನಿರ್ಧಾರವನ್ನು ಮರುಪರಿಶೀಲಿಸಲು ಆಗ್ರಹಿಸಿದರು. ಮೈಸೂರು ದಸರಾ ಉದ್ಘಾಟನೆಗೆ ಭಾನು ಮುಸ್ತಾಕ ಅವರನ್ನು ಆಹ್ವಾನಿಸಿರುವ ಸರ್ಕಾರದ ನಿರ್ಧಾರ ಕರ್ನಾಟಕದ ಕೋಟ್ಯಾಂತರ ಹಿಂದೂ ಭಕ್ತರಲ್ಲಿ ತೀವ್ರ ಬೇಸರವನ್ನುಂಡಿ ಮಾಡಿದೆ. ಮೈಸೂರು ದಸರಾ ಕೇವಲ ಸಾಂಸ್ಕೃತಿಕ ಹಬ್ಬವಲ್ಲ, ಅದೊಂದು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಪ್ರತಿಬಿಂಬವಾಗಿದೆಯಲ್ಲದೆ ಧಾರ್ಮಿಕ ಹಾಗೂ ಪಾರಂಪರಿಕ ಹಬ್ಬವಾಗಿದೆ. ಒಂಬತ್ತು ದಿನಗಳ ನವರಾತ್ರಿಯಲ್ಲಿ ಕಾಳಿ, ಮಹಾಲಕ್ಷ್ಮಿ, ಸರಸ್ವತಿ ದೇವಿಯರ ಆರಾಧನೆ ನಡೆಯುತ್ತಿದ್ದು, 10ನೇ ದಿನ ದೇವಿ ಚಾಮುಂಡೇಶ್ವರಿ ಮಹಿಷಾಸುರನನ್ನು ಸಂಹಾರ ಮಾಡಿದ ವಿಜಯೋತ್ಸವವನ್ನು ಆಚರಿಸಲಾಗುತ್ತದೆ. ಇಂತಹ ಪವಿತ್ರ ಹಬ್ಬದ ಉದ್ಘಾಟನೆಗೆ ಆಹ್ವಾನಿತ ಮುಖ್ಯ ಅತಿಥಿಯು ದೇವಿಯ ಮೇಲೆ ಶ್ರದ್ದೆ. ಮೂರ್ತಿ ಪೂಜೆಯ ಮೇಲೆ ಭಕ್ತಿ ಹಾಗೂ ನಾಡದೇವಿಯ ಮೇಲೆ ಗೌರವ ಹೊಂದಿರಬೇಕು. ಆದರೆ ಭಾನು ಮುಸ್ತಾಕ ಅವರು ಹಿಂದಿನ ಭಾಷಣಗಳಲ್ಲಿ ನಾಡದೇವಿ ಭುವನೇಶ್ವರಿ ದೇವಿಯನ್ನು ನಂಬುವುದಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದು, ದತ್ತಪೀಠ ಹೋರಾಟದ ಸಂದರ್ಭದಲ್ಲೂ ಮುಸ್ಲಿಂ ಸಮುದಾಯದ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇಂತಹ ವ್ಯಕ್ತಿಯನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವುದು ಅನುಚಿತವಾಗಿದ್ದು, ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ. ಕರ್ನಾಟಕವು ಸಂಸ್ಕೃತಿ, ಪರಂಪರೆ ಮತ್ತು ಮೌಲ್ಯಗಳನ್ನು ಪ್ರತಿಬಿಂಬಿಸುವ ಅಸಂಖ್ಯಾತ ಗಣ್ಯರನ್ನು ಹೊಂದಿದೆ. ಪ್ರಸಿದ್ಧ ಸಾಹಿತಿ ಡಾ. ಎಸ್. ಎಲ್. ಭೈರಪ್ಪ ಅವರು ಭಾರತದ ಅತ್ಯುನ್ನತ ಸಾಹಿತ್ಯ ಸಮ್ಮಾನಗಳ ಜೊತೆಗೆ ಪದ್ಮಭೂಷಣ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅವರ ಸಾಹಿತ್ಯ ಮತ್ತು ದಾರ್ಶನಿಕ ಕೃತಿಗಳು ರಾಷ್ಟ್ರ ಮಟ್ಟದಲ್ಲಿ ಕೀರ್ತಿ ತಂದುಕೊಟ್ಟಿವೆ. ಇಂತಹ ಕೀರ್ತಿಶಾಲಿ ವ್ಯಕ್ತಿಯನ್ನು ಕಡೆಗಣಿಸಿ ವಿದೇಶಿ ಬೂಕರ್ ಪ್ರಶಸ್ತಿ ಪಡೆದವರನ್ನು ಆಹ್ವಾನಿಸುವುದು ಎಷ್ಟು ಸರಿಯೆಂದು ಪ್ರಶ್ನಿಸಿದ್ದಾರೆ. ಬಾನು ಮುಸ್ತಾಕರನ್ನು ಆಹ್ವಾನಿಸುವ ನಿರ್ಧಾರವನ್ನು ತಕ್ಷಣ ಹಿಂತೆಗೆದುಕೊಳ್ಳುವಂತೆ ಹಾಗೂ ಈ ಪವಿತ್ರ ಹಬ್ಬದ ಉದ್ಘಾಟನೆಗೆ ಡಾ. ಎಸ್. ಎಲ್. ಭೈರಪ್ಪ ಅವರಂತಹ ಗಣ್ಯರನ್ನು ಗೌರವಿಸುವಂತೆ ಕರ್ನಾಟಕದ ಕೋಟ್ಯಾಂತರ ಭಕ್ತರ ಪರವಾಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ. ಬಾನು ಮುಸ್ತಾಕ ಅವರನ್ನು ಉದ್ಘಾಟನೆಯಿಂದ ಕೈ ಬಿಟ್ಟರೆ ಮೈಸೂರು ದಸರಾ ಹಬ್ಬದ ಪಾವಿತ್ರ್ಯ ಕಾಪಾಡಲ್ಪಡುವ ಜೊತೆಗೆ ಹಿಂದೂ ಸಮುದಾಯದ ಭಾವನೆಗಳಿಗೆ ನ್ಯಾಯ ಸಿಗುತ್ತದೆ ಎಂದಿರುವ ಮನವಿದಾರರು ಈ ಕುರಿತು ಕೂಡಲೇ ಮರುಪರಿಶೀಲಿಸಿ ಸೂಕ್ತ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
© ASK News Kannada. All Rights Reserved. Designed by AGScurate IT Solutions LLP