ಗದಗ,ಮಾ,29 : ಗದುಗಿನ ತೋಂಟದಾರ್ಯ ಮಠವು ಜಾತ್ರೆಯ ಹೆಸರಿನಲ್ಲಿ 2 ತಿಂಗಳ ಕಾಲ ಮಠದ ಮುಂದಿನ ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿ ಹೊರ ರಾಜ್ಯದ ಜನರಿಗೆ ಟೆಂಡರ್ ನೀಡಿ ಸ್ಥಳೀಯ ವ್ಯಾಪಾರಸ್ಥರಿಗೆ ಹಾಗೂ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಹಿಂದೂ-ವೀರಶೈವ- ಲಿಂಗಾಯತ ಯುವ ವೇದಿಕೆಯ ಸಂಚಾಲಕ ರಾಜು ಖಾನಪ್ಪನವರ ತೋಂಟದಾರ್ಯ ಜಾತ್ರಾ ಕಮೀಟಿ ವಿರುದ್ಧ ಹಲವಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದು, ಕಳೆದ ವರ್ಷದ ಜಾತ್ರೆಯ ಸಮಯದಲ್ಲಿ ಅವಧಿ ಮೀರಿ ಜಾತ್ರೆ ನಡೆಸಿದ್ದಕ್ಕೆ ಪ್ರತಿಭಟನೆ ನಡೆಸಿದ್ದರ ವಿರುದ್ಧ ಗದುಗಿನ ತೋಂಟದಾರ್ಯ ಮಠದ ಮಹಾಸ್ವಾಮಿಗಳು ಗದುಗಿನ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದಲ್ಲಿ (ಓಎಸ್ ನಂ.552/2025) ರೂ. 20,00,000-00 (ಇಪ್ಪತ್ತು ಲಕ್ಷ ರೂಪಾಯಿಗಳು) ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಲ್ಲದೆ ಜಾತ್ರೆಗೆ ಅಡೆತಡೆ ಮಾಡದಂತೆ ಖಾಯಂ ನಿರ್ಬಂಧಕಾಜ್ಞೆ ನೀಡಬೇಕೆಂದು ಪ್ರಕರಣ ದಾಖಲಿಸಿದ್ದರು. ಇದರ ಜೊತೆಗೆ ಇದೇ 2026 ಏಪ್ರಿಲ್ 1 ರಿಂದ ಜಾತ್ರೆ ಆರಂಭವಾಗುತ್ತಿದ್ದು ಪ್ರತಿವಾದಿ ರಾಜು ಖಾನಪ್ಪನವರ ತೋಂಟದಾರ್ಯ ಮಠದ ಕಾರ್ಯಕ್ರಮಗಳಿಗೆ ವಿಶೇಷವಾಗಿ ಜಾತ್ರಾ ಮಹೋತ್ಸವದ ಸಮಯದಲ್ಲಿ ಅಡ್ಡಿಪಡಿಸದಂತೆ ತಡೆ ಆದೇಶ ನೀಡಬೇಕು ಹಾಗೂ ಮಠದ ವಿರುದ್ಧ ಅವಹೇಳನಕಾರಿಯಾಗಿ ಪದಗಳನ್ನು ಬಳಸದಂತೆ ತಡಯಾಜ್ಞೆ ನೀಡಬೇಕೆಂದು ನ್ಯಾಯಾಲಯಕ್ಕೆ ಮಧ್ಯಂತರ ಅರ್ಜಿಯನ್ನು ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ಪ್ರತಿವಾದಿ ರಾಜು ಖಾನಪ್ಪನವರ ಅವರು ತಾವು ಯಾವುದೇ ಅವಹೇಳನಕಾರಿ ಮಾತು ಹೇಳಿಲ್ಲ. ಜಾತ್ರೆಯಲ್ಲಿ ಹೊರ ರಾಜ್ಯದವರಿಗೆ ಟೆಂಡರ್ ನೀಡುವುದರಿಂದ ಸ್ಥಳೀಯ ವ್ಯಾಪಾರಸ್ಥರಿಗೆ ತೊಂದರೆಯಾಗಿ ಅವರ ವ್ಯಾಪಾರ ವ್ಯವಹಾರಗಳಿಗೆ ಪೆಟ್ಟು ಬೀಳುತ್ತದೆ. ಸ್ಥಳೀಯ ವ್ಯಾಪಾರಿಗಳಿಗೆ ಅವಕಾಶ ನೀಡಬೇಕೆಂದು ನಾನು ಪ್ರತಿಭಟನೆ ಮಾಡಿದ್ದೇನೆ. ಅಲ್ಲದೇ ಜಾತ್ರೆಯಲ್ಲಿ ಹೊರ ರಾಜ್ಯದಿಂದ ಬಂದಂತಹ ವ್ಯಾಪಾರಿಗಳು ಯಾವುದೇ ಜಿಎಸ್‌ಟಿ ಬಿಲ್ಲುಗಳನ್ನು ನೀಡುತ್ತಿಲ್ಲ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹಾನಿಯಾಗುತ್ತಿದೆಯಲ್ಲದೆ 2 ತಿಂಗಳುಗಳ ಕಾಲ ರಸ್ತೆಯ ಮೇಲೆ ಮಾರಾಟ ಮಳಿಗೆ ಹಾಕುವುದರಿಂದ ರಸ್ತೆ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿರುವುದರಿಂದ ಸಾರ್ವಜನಿಕರ ಹಾಗೂ ಸ್ಥಳೀಯ ವ್ಯಾಪಾರಸ್ಥರ ಹಿತಾಸಕ್ತಿ ಕಾಯಲು ಪ್ರತಿಭಟನೆ ಮಾಡಲಾಗಿದೆ ಎಂದು ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ್ದರು. ವಾದ-ವಿವಾದಗಳನ್ನು ಆಲಿಸಿದ ನ್ಯಾಯಾಲಯವು ವಾದಿ ತೋಂಟದಾರ್ಯ ಮಠದವರು ಸಲ್ಲಿಸಿದ್ದ ಪತ್ರಿಕಾ ಪ್ರಕಟಣೆಯ ಸುದ್ದಿಯಲ್ಲಿ ಅವಹೇಳನಕಾರಿ ಮಾತು ಸ್ಪಷ್ಟವಾಗಿ ಸಾಬೀತಾಗುತ್ತಿಲ್ಲ. ಸಿ.ಡಿ. ಮತ್ತು ಪೆನ್ ಡ್ರೈವ್ ಹಾಜರ್ ಪಡಿಸಿದ್ದರೂ ಅದಕ್ಕೆ ಭಾರತೀಯ ಸಾಕ್ಷ್ಯ ಅಧಿನಿಯಮದ ಪ್ರಕಾರ ಪ್ರಮಾಣಪತ್ರ ನೀಡಲಾಗಿಲ್ಲ. ಹೀಗಾಗಿ ಈ ಪ್ರಕರಣದ ಸುದೀರ್ಘ ವಿಚಾರಣೆಯ ಅಗತ್ಯವಿದೆ. ಕಾರಣ ರಾಜು ಖಾನಪ್ಪನವರ ವಿರುದ್ಧ ಕೋರಿದ್ದ ಮದ್ಯಂತರ ತಡೆಯಾಜ್ಞೆ ಅರ್ಜಿಯನ್ನು ವಜಾ ಮಾಡಿ ಮಾನ್ಯ ನ್ಯಾಯಾಲಯ ಆದೇಶ ಹೊರಡಿಸಿ ಮುಂದಿನ ವಿಚಾರಣೆಯನ್ನು ಎಪ್ರೀಲ್ 4 ಕ್ಕೆ ಮುಂದೂಡಿದೆ ಎಂದು ಪತ್ರಿಕಾ ಪ್ರಕಟಣೆಯ ಮೂಲಕ ಹಿಂದೂ-ವೀರಶೈವ-ಲಿಂಗಾಯತ ಯುವ ವೇದಿಕೆಯ ಸಂಚಾಲಕ ರಾಜು ಖಾನಪ್ಪನವರ ತಿಳಿಸಿರುವ ಜೊತೆಗೆ ತಾವು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುವುದಾಗಿ ಹೇಳಿದ್ದಾರೆ. ರಾಜು ಖಾನಪ್ಪನವರ ಪರವಾಗಿ ನ್ಯಾಯಾಲಯದಲ್ಲಿ ನ್ಯಾಯವಾದಿ ಟಿ.ಎನ್.ಭಾಂಡಗೆಯವರು ವಾದ ಮಂಡಿಸಿದ್ದರು. ಭಕ್ತರ ಮನ ಮನೆ ಬೆಳಗುವಂತಿರುವ ಪ್ರಸಿದ್ಧ ನಮ್ಮೂರ ಜಾತ್ರೆ ಬಗೆಗೆ ಅಪಸ್ವರ ಬರದಂತೆ ನೋಡಿಕೊಳ್ಳುವಲ್ಲಿ ಎಲ್ಲರೂ ಮುಂದಾಗಬೇಕಾದ ಅಗತ್ಯ ಇದೆ ಎಂಬ ಮಾತುಗಳು ಈ ಮಧ್ಯೆ ಕೇಳಿ ಬರುತ್ತಿವೆ.
© ASK News Kannada. All Rights Reserved. Designed by AGScurate IT Solutions LLP