ಗದಗ, ಎ. 22 : ಈ ಜಗತ್ತಿನಲ್ಲಿ ಎಲ್ಲರನ್ನೂ ಮೊದಲು ಮಾಡಿಕೊಂಡು ಬ್ರಹ್ಮ ವಿಷ್ಣು ಮಹೇಶ್ವರರನ್ನು ಸೃಷ್ಟಿ ಮಾಡಿದವಳು ತಾಯಿಯೇ ಎಂಬುದನ್ನು ಶೃತಿ ಸ್ಮೃತಿಗಳೇ ಸಾರಿವೆ. ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಹುಟ್ಟುವುದಿಲ್ಲ ಎಂಬುದು ಆದಿ ಶಂಕರಾಚಾರ್ಯರ ಮಂತ್ರಘೋಷವಾಗಿದೆ. ಸನ್ಯಾಸಿಯಾದವರಿಗೆ ಹಲವಾರು ಕಟ್ಟುಪಾಡುಗಳು ಇರುತ್ತವೆ. ಆದರೆ ಶಂಕರರ ಸ್ವರೂಪರಾದ ಶಂಕರಾಚಾರ್ಯರು ತಮ್ಮ ತಾಯಿಯ ಅಂತಿಮ ಸಂಸ್ಕಾರಕ್ಕೆ ಹೋಗಿದ್ದರಂತೆ ಇದೆಷ್ಟು ವಿಚಿತ್ರ ನೋಡಿ. ಇಂತಹ ಮಹಾತ್ಮರಾದವರೂ ತಾಯಿಗೆ ಪ್ರಥಮ ಸ್ಥಾನ ಕೊಟ್ಟಿದ್ದಾರೆಂದರೆ ತಾಯಿ ಸ್ಥಾನಮಾನ ಹೇಗಿದೆ ಎಂಬುದು ಅರ್ಥವಾಗದೆ ಇರಲಾರದು. ಸಾಮಾನ್ಯವಾಗಿ ತಾಯಿಯ ಬಗ್ಗೆ ವಾಸ್ತವಿಕವಾಗಿ ವರ್ಣಿಸುವುದೇನು ಅಗತ್ಯವಿಲ್ಲ. ಆದರೆ ತಾಯಿತನ ಎಂದರೆ ತಾಯಿಗಿಂತ ಹೆಚ್ಚು ಪರರ ಮಕ್ಕಳನ್ನು ತನ್ನವೆಂದು ತನ್ನ ಹೊಟ್ಟೆಯಲ್ಲಿ ಹುಟ್ಟಲಿಲ್ಲವೆಂದರೂ ಅವರಿಗೆ ತನ್ನವರೆಂದು ಉಣ್ಣಿಸಿ ತಿನ್ನಿಸಿ ಕರುಣೆಯನ್ನು ತೋರಿಸುತ್ತಾರೆ. ಅಂಥವರು ಇತಿಹಾಸದ ಪುಟಗಳಲ್ಲಿ ಉಳಿಯುತ್ತಾರೆ. ಯಾವುದೇ ಮಹಾತ್ಮರಿರಲಿ ಅವರಲ್ಲಿ ತಾಯಿತನ ಇದ್ದಲ್ಲಿಯೇ ಅವರು ದೊಡ್ಡವರೆನಿಸಿಕೊಳ್ಳುತ್ತಾರೆ. ಓರ್ವ ತಾಯಿಯು ತನ್ನ ನಾಲ್ಕಾರು ಮಕ್ಕಳಲ್ಲಿ ಕೆಲವರನ್ನು ಒಳ್ಳೆಯವರೆನ್ನುತ್ತಾರೆ ಮತ್ತೊಬ್ಬರನ್ನು ದ್ವೇಷದಿಂದ ಕಾಣುತ್ತಾರೆ. ಆದರೆ ತಾಯಿತನದಲ್ಲಿ ಹಾಗಲ್ಲ ಮಾತೃ ವಾತ್ಸಲ್ಯ ಹೃದಯವಿದ್ದವರು ತಾಯಿಯೆ ಆಗಬೇಕೆಂದೆನಿಲ್ಲ. ಹಾಗಂತ ಎಲ್ಲ ತಾಯಂದಿರಲ್ಲೂ ತಾಯ್ತನ ಇರುವುದಿಲ್ಲ. ಹೆತ್ತ ತಾಯಿಯು ತನಗೆ ಉಪಯುಕ್ತನಾಗಲಿಲ್ಲವೆಂದರೆ ಅವನು ನನ್ನ ಮಗನೇ ಅಲ್ಲ ಎನ್ನುತ್ತಾಳೆ. ಹೆತ್ತ ತಾಯಿಯಲ್ಲಿ ನನ್ನನ್ನು ಜೋಪಾನ ಮಾಡುತ್ತಾನೆಂಬ ಸ್ವಾರ್ಥವಿರುತ್ತದೆ. ಆದರೆ ತಾಯ್ತನದಲ್ಲಿ ಹಾಗಿರುವುದಿಲ್ಲ. ತಾಯಿಯ ದೃಷ್ಟಿಯೇ ಬೇರೆ. ತಾಯಿತನ ಹೊಂದಿದವರು ಪರರ ಮಕ್ಕಳಿಗೆ ಉಣ್ಣಿಸುವುದು, ಸಂತೈಸುವುದು, ಸೇವೆ ಮಾಡುವುದನ್ನು ಪರೋಪಕಾರವೆಂದು ತಿಳಿದಿರುತ್ತಾರೆ. ಮುಂದೆ ನನಗೆ ಜೋಪಾನ ಮಾಡುತ್ತಾರೆಂಬ ಸ್ವಾರ್ಥ ಇರುವುದಿಲ್ಲ. ಹಾಗಾಗಿಯೇ ತಾಯಿತನ ಹೊಂದಿದವರನ್ನು ಕಂಡಾಗ ಪೂಜ್ಯ ಭಾವನೆ ಬರುತ್ತದೆ. ಒಬ್ಬ ತಾಯಿ ಮಗು ಪಡೆದಾಗ ಪೂರ್ಣ ಸ್ತ್ರೀ ಆಗುತ್ತಾಳೆ. ಮಗು ಪಡೆದ ತಾಯಿ ಆ ಮಗುವಿಗೆ ಮಾತ್ರ ತಾಯಿಯಾದರೆ ತಾಯಿತನ ಹೊಂದಿದವರಿಗೆ ಇಡೀ ಲೋಕವೇ ಮಗುವಾಗಿ ಕಾಣುತ್ತದೆ. ತನ್ನ ಮನೆಗೆ ಯಾರೇ ಬಂದರು ತನ್ನ ಮಗುವಿಗೆ ಉಣಿಸಿದ ಹಾಗೆಯೇ ಭಾವಿಸುತ್ತಾಳೆ. ಜನುಮ ನೀಡಿದ ತಾಯಿಗಿಂತ ಈ ತಾಯಿತನ ಶ್ರೇಷ್ಠವಾದದ್ದು. ತಾಯಿತನ ಎನ್ನುವುದು ಪುರುಷರಲ್ಲೂ ಇರಬಹುದು ಮಹಿಳೆಯರಲ್ಲೂ ಇರಬಹುದು ಇವರೆಲ್ಲರೂ ಮಹಾತ್ಮರೇ. ಕಲಿಸುವುದು ಹಣ ಕೊಡುವುದು ಮುಖ್ಯವಲ್ಲ ಎಲ್ಲಕ್ಕಿಂತ ಮಿಗಿಲಾಗಿ ಲೋಕದ ಮಕ್ಕಳನ್ನು ತನ್ನವರೆಂದು ಕಾಣುವುದೇ ಶ್ರೇಷ್ಠ. ಸರ್ವಜ್ಞ ಹೇಳುತ್ತಾನೆ ಈ ಲೋಕದಲ್ಲಿ ತಾಯಿತನ ಉಳ್ಳವರೇ ಮಹಾತ್ಮರೆಂದು. ಅಂತಹ ತಾಯಿತನ ಆತ್ಮರಲ್ಲಿ ಡಾ.ಸತೀಶ ಹೊಂಬಾಳಿಯವರ ಮಾತೋಶ್ರೀಯವರು ಒಬ್ಬರು. ಬ್ರಾಹ್ಮಣ್ಯ ಬೇರೆ ಬ್ರಾಹ್ಮಣ ಬೇರೆ ಬ್ರಾಹ್ಮಣ್ಯ ಎಂದರೆ ಜಾತಿ ಕುಲ ಗೋತ್ರ ಆಚಾರ ವಿಚಾರಗಳು ಇರುತ್ತವೆ. ಬ್ರಾಹ್ಮಣ ಎಂದರೆ ಆ ಜಾತಿಯಲ್ಲಿ ಜನಿಸುತ್ತಾನೆ. ಆದರೆ ಆಚಾರ ವಿಚಾರ ಮಡಿ ಮೈಲಿಗೆಯನ್ನು ತನ್ನ ಮನೆಯೊಳಗಷ್ಟೇ ಸೀಮಿತಗೊಳಿಸಿ ಲೋಕವನ್ನೇ ಜ್ಞಾನದ ದೃಷ್ಟಿಯಿಂದ ನೋಡುತ್ತಾನೆ. ಇಂಥವರು ಸಿಗುವುದು ಅಪರೂಪ. ಅಂತಹ ಅಪರೂಪದ ಕುಟುಂಬವೇ ಡಾ.ಸತೀಶ ಹೊಂಬಾಳಿವರ ಮನೆತನ. ಅಂದು 1996-97 ಡಾ.ಸತೀಶ ಎಂ. ಹೊಂಬಾಳಿ ಗುರುಗಳು ಪ್ರಪ್ರಥಮದಲ್ಲಿ ಒಂದು ಯೋಗ ಶಿಬಿರದಲ್ಲಿ ನನಗೆ ಪರಿಚಯವಾದರು. ಆ ಶಿಬಿರಕ್ಕೆ ಕಾರ್ಕಳದ ಗೋವಿಂದ ಪೈ ಮತ್ತು ನನ್ನ ಪೂಜ್ಯ ಗುರುಗಳಾದ ಶ್ರೀ ಬಿ.ಜಿ.ಅಣ್ಣಿಗೇರಿ ಗುರುಗಳು ಸಹ ಅತಿಥಿಗಳಾಗಿ ಆಗಮಿಸಿದ್ದರು. ಆಗ ನಾನು ಪಿ.ಯು.ಸಿ. ಪ್ರಥಮ ವರ್ಷ ಹಚ್ಚಿದ್ದೆ. ಗುರುಗಳ ಜೊತೆಗೆ ಹಿಂಬಾಲಕನಾಗಿ ಹೋಗಿದ್ದೆ. ಯೋಗಾಯೋಗ ಎಂಬಂತೆ ಗುರುಗಳ ಮೂಲಕ ಪರಿಚಯವಾದ ಡಾ.ಸತೀಶ ಹೊಂಬಾಳಿಯವರು ಗುರುಗಳ ವಿನಂತಿಯ ಮೇರೆಗೆ ನನಗೆ ಪಿ.ಯು.ಸಿ ಪ್ರಥಮ ವರ್ಷದ ಬಯಾಲಜಿ ವಿಷಯ ಹೇಳಿಕೊಡಲು ನಾಳೆಯಿಂದಲೇ ಬರಬಹುದು ಎಂದರು. ಮರುದಿನದಿಂದಲೇ ನಾನು ಮತ್ತು ಸತೀಶ ಪತ್ತಾರ ಕೂಡಿಕೊಂಡು ಹೊಂಬಾಳಿ ಸರ್ ಮನೆಗೆ ಟ್ಯೂಶನ್ ಹೇಳಿಸಿಕೊಳ್ಳಲು ಹೋದೆವು. ಹೊಂಬಾಳಿ ಸರ್ ಅವರು ಹುಲಕೋಟಿಯ ಯೋಗ ಮತ್ತು ಪೃಕೃತಿ ಚಿಕಿತ್ಸೆ ಆಸ್ಪತ್ರೆಯಲ್ಲಿ ತಮ್ಮ ವೈದ್ಯ ವೃತ್ತಿಯನ್ನು ಮುಗಿಸಿಕೊಂಡು ಬಂದು ಸಂಜೆ 7.00 ರಿಂದ 8.30ರ ವರೆಗೆ ನಮಗೆ ಮನೆ ಪಾಠ ಮಾಡಿದರು. ಪಿ.ಯು.ಸಿ. ಎರಡೂ ವರ್ಷಗಳ ವರೆಗೂ ಉಚಿತವಾಗಿ ಕ್ಲಾಸುಗಳನ್ನು ಹೇಳಿದರು. ಒಂದೊಮ್ಮೆ ನಾವು ವೇಳೆಗೆ ಮುಂಚೆಯೇ ಹೋದಾಗ ನಿಮ್ಮ ಡಾಕ್ಟರ್ ಹುಲಕೋಟಿಯಿಂದ ಬರತಾರ ಕೂಡಿರಿ ಎಂದು ಅವ್ವಾರು ಖುರ್ಚಿಯ ಮೇಲೆ ಕೂಡಿಸುತ್ತಿದ್ದರು. (ಸತೀಶ ಹೊಂಬಾಳಿ ಸರ್ ಅವರ ತಾಯಿ ಅವರ ಹೆಸರಂತೂ ನಮಗೆ ಗೊತ್ತಿರಲಿಲ್ಲ) ಎಲ್ಲ ಕ್ಲಾಸುಗಳು ಮುಗಿದ ಮೇಲೆ ನಾನು ಅಲ್ಲೇ ಅವರ ಮನೆಯಲ್ಲೇ ತಾಸುಗಟ್ಟಲೆ ಇದ್ದು ಹೋಗುತ್ತಿದ್ದೆ. ಆಗ ಅವ್ವಾರು ನನ್ನ ಮನೆತನದ ಕುರಿತು ಮಾಹಿತಿ ತಿಳಿದು ಇಲ್ಲಿಯೇ ಊಟ ಮಾಡಿಕೊಂಡು ಹೋಗು ಎಂದು ನನ್ನನ್ನು ತಮ್ಮ ಪಕ್ಕದಲ್ಲಿಯೇ ಕೂಡಿಸಿಕೊಂಡು ಊಟ ಮಾಡಿಸಿ ಕಳುಹಿಸುತ್ತಿದ್ದರು. ಹೀಗೆ ಹಲವಾರು ಬಾರಿ ನನಗೆ ಉಣ್ಣಿಸಿದ ಆ ತಾಯಿಯ ತಾಯಿತನ ನನಗಿನ್ನೂ ನೆನಪೋಲೆಯಲ್ಲಿಯೇ ಇದೆ. ಸತೀಶ ಹೊಂಬಾಳಿ ಗುರುಗಳಿಂದ ಉಚಿತ ಟ್ಯೂಶನ್ ಮತ್ತು ಅವರ ಮನೆಯಲ್ಲೇ ನನ್ನ ಹೊಟ್ಟೆ ಮತ್ತು ನೆತ್ತಿ ತುಂಬಿದ್ದು ಅದಿನ್ನೂ ನನ್ನ ಹೃದಯದಲ್ಲಿ ಮಡುಗಟ್ಟಿ ನಿಂತಿದೆ. ಹೀಗೆ ಪಿ.ಯು.ಸಿ. ಮುಗಿದ ಮೇಲೆಯೂ ನಾನು ಸರ್ಕಾರಿ ಶಾಲಾ ಶಿಕ್ಷಕನಾಗುವರೆಗೂ ಡಾ.ಹೊಂಬಾಳಿ ಗುರುಗಳ ಸಾಮಿಪ್ಯವನ್ನು ಬಿಡಲಿಲ್ಲ. ಮುಂದೆ ನಾನು ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು. ಏನು, ಎತ್ತ ಎಂಬ ಸಲಹೆ ಪಡೆಯಲು ಹೋಗುತ್ತಿದ್ದಾಗಲೂ ನಿಮ್ಮ ಡಾಕ್ಟರ್ ಇನ್ನೂ ಬಂದಿಲ್ಲ. ಬರುವುದು ತಡ ಆಗ್ತದ ನೀನು ಊಟ ಮಾಡು ಎಂದು ಮನೆಮಂದಿಗೆಲ್ಲ ಮಾಡಿಟ್ಟಿದ್ದ ಬಿಸಿ ಅಡುಗೆಯನ್ನು ಮೊದಲು ನನಗೆ ಬಡಿಸಿ ಊಟ ಮಾಡಿಸುತ್ತಿದ್ದರು. ಅವರ ಆ ತಾಯಿತನವು ನನಗಿನ್ನೂ ನಿನ್ನೆ ಮೊನ್ನೆ ನೋಡಿದಂತಾಗುತ್ತಿದೆ. ಅದು ಇಂದಿಗೂ ಮುಂದುವರೆದಿದೆ. ಇತ್ತೀಚೆಗೆ ಎರಡ್ಮೂರು ವರ್ಷಗಳಿಂದಷ್ಟೇ ಶ್ರವಣೇಂದ್ರಿಗಳು ತಮ್ಮ ಕಾರ್ಯವನ್ನು ನಿಲ್ಲಿಸಿದ್ದವು. ಹಾಗಾಗಿ ಹೊಸ್ತಿಲು ದಾಟಿ ಒಳಗೆ ಹೋಗುತ್ತಿದ್ದಂತೆಯೇ ಮುಖವಾಣಿಯಿಂದಲೇ ಬರಮಾಡಿಕೊಂಡು ಆಂಗಿಕ ಚಲನೆಯ ಮೂಲಕವೇ ಸಿದ್ದುಗ ತಿನ್ನಾಕ ಏನಾದರೂ ಕೊಡ್ರಿ ಎನ್ನುತ್ತಿದ್ದರು. ಅಷ್ಟೊತ್ತಿಗೆ ಹೊಂಬಾಳಿ ಗುರುಗಳು ಹಣ್ಣುಗಳನ್ನು ಕೊಡುತ್ತಿದ್ದರು. ಆದರೆ ಏನು ಮಾಡುವುದು ಈಗ ಆ ತಾಯಿತನ ಪ್ರೀತಿಯೆಲ್ಲ ಕಣ್ಣಾಮುಚ್ಚೆ ಕಾಡೆಗೂಡೆ ಉದ್ದಿನ ಮೋಟೆ ಉರುಳಿ ಹೋಯ್ತು, ಬಣ್ಣದ ತಗಡಿನ ತುತ್ತೂರಿ ಜಾರಿ ಹೊಯಿತು ಗಂಗೆಯಲ್ಲಿ ಎನ್ನುವಂತಾಗಿದೆ. ಈ ತಾಯಿತನವು ದೇಹಾಂತರಾಗುವ ವರ್ಷ ಒಪ್ಪತ್ತು ದಿನಗಳಲ್ಲಿ ನಮ್ಮ ಸತೀಶ ಹೊಂಬಾಳಿ ಗುರುಗಳು ಇವರ ಶುಶ್ರೂಷೆ ಮಾಡಿದ ಪರಿಯನ್ನು ಎಂತಹ ದೊಡ್ಡವರಿದ್ದರೂ ಅನುಕರಣೆ ಮಾಡಿಕೊಳ್ಳಲೇಬೇಕು. ಅಪ್ಪ ಮನೋಹರ ಬಾಬಾರನ್ನು ಹೇಗೆ ಜೋಪಾನ ಮಾಡಿದರೋ ಅದಕ್ಕಿಂತ ಹೆಚ್ಚಾಗಿ ಶುಶ್ರೂಷೆ ಮಾಡಿದರು. ಬೇರೆ ಯಾರಿಗೂ ಒಂದು ದಿನವೂ ಶುಶ್ರೂಷೆ ಮಾಡಲು ಬಿಡುತ್ತಿರಲಿಲ್ಲ. ಮಾತೃ ಭಕ್ತಿಯೊಂದಿಗೆ ಇವರ ಕರ್ತವ್ಯ ಪ್ರಜ್ಞೆಯನ್ನೂ ಸಹ ದಾಖಲಿಸಲೇಬೇಕು ಎಂದೆನಿಸುತ್ತದೆ. ಬೆಳಿಗ್ಗೆ ಒಂದಾವರ್ತಿ ಸ್ನಾನ ಉಪಹಾರ ಮಾಡಿಸಿ ಖುರ್ಚಿಯ ಮೇಲೆ ಕೂಡಿಸಿ ತಮ್ಮ ನಿತ್ಯದ ಪೃಕೃತಿ ಚಿಕಿತ್ಸಾ ಕೇಂದ್ರ ಹುಲಕೋಟಿಗೆ ಹೋಗುತ್ತಿದ್ದರು. ಮತ್ತೆ ಮಧ್ಯಾಹ್ನ 1 ರಿಂದ 2 ಗಂಟೆಯ ಊಟದ ಸಮಯದಲ್ಲಿಯೆ ಹುಲಕೋಟಿಯಿಂದ ಗದುಗಿಗೆ ಬಂದು ಮತ್ತೆ ಅವರಿಗೆ ಗಂಜಿ/ಜ್ಯೂಸನ್ನು ಕೊಟ್ಟು ಮತ್ತೆ 2 ಗಂಟೆ ಒಳಗಾಗಿಯೇ ಹುಲಕೋಟಿಯ ಆಸ್ಪತ್ರೆಗೆ ಬಂದು ತಮ್ಮ ಕರ್ತವ್ಯದಲ್ಲಿ ತಾವು ತೊಡಗುತ್ತಿದ್ದರು. ಮನೆಯಲ್ಲಿ ಅವ್ವನಿಗೆ ಹುಷಾರಿಲ್ಲವೆಂದು ಆಸ್ಪತ್ರೆಯ ಸಂಸ್ಥಾಪಕರು, ಅಧೀಕ್ಷಕರ ಪರಿಚಯವನ್ನು ಎಂದಿಗೂ ಸ್ವಾರ್ಥಕ್ಕಾಗಿ ಬಳಸಿಕೊಳ್ಳದೇ ವೇಳೆಗೆ ಸರಿಯಾಗಿ ಮತ್ತು ಅಗತ್ಯ ಬಿದ್ದರೆ ಡ್ಯೂಟಿಯ ವೇಳೆಯ ನಂತರವೂ ತಮ್ಮ ಕರ್ತವ್ಯವನ್ನು ತಾವು ಮಾಡುತ್ತಿದ್ದ ಡಾ.ಹೊಂಬಾಳಿಯವರಿಗೆ ಹ್ಯಾಟ್ಸಾಪ್ ಹೇಳಲೇಬೇಕು. ಈ ದಿಸೆಯಲ್ಲಿ ವ್ಯಕ್ತಿಯಿಂದ ಸಂಸ್ಥೆ ಬೆಳೆಯಬೇಕು. ಹೊರತು ಸಂಸ್ಥೆಯಿಂದ ವ್ಯಕ್ತಿ ಬೆಳೆಯಬಾರದು. ಎಂಬುದನ್ನು ತೋರಿಸಿಕೊಟ್ಟವರಿವರು. ಆದರೂ ಗುರುಗಳ ಸಾರ್ಥಕತೆಯು ಸಂತೃಪ್ತಗೊಂಡು ಅವ್ವಾರು ಮೊನ್ನೆ ಶನಿವಾರ 11-04-2026 ಸಂಧ್ಯಾಕಾಲದಂದು ದೇಹಾಂತರಾದರು. ಆ ಪಾರ್ಥಿವವಾದ ಅವರ ಪಾರ್ಥಿವ ಶರೀರವನ್ನು ಎತ್ತಿಕೂಡಿಸುವಾಗ ನನಗಂತೂ ದುಃಖ ಉಮ್ಮಳಿಸಿ ಬಂದಿತು. ಆಗ ಹೊಂಬಾಳಿ ಗುರುಗಳ ದುಃಖ ನೋಡುತ್ತಿದ್ದಂತೆಯೇ ಅವ್ವ ಬದುಕಿದ್ದಾಗಲೇ ಸೇವೆ ಮಾಡಬೇಕು. ನಂತರ ಅಳು ಬರುವುದಿಲ್ಲವೆಂದರು. ಡಾ.ಸತೀಶ ಹೊಂಬಾಳಿ ಗುರುಗಳ ಮಾತಿನಲ್ಲಿ ಹೇಳುವುದಾದರೆ ಪಿ.ಲಂಕೇಶ ಅವರು ಬರೆದ ಅವ್ವ ಕವನವನ್ನು ಹೋಲುತ್ತದೆ. ನನ್ನವ್ವ ಫಲವತ್ತಾದ ಕಪ್ಪು ನೆಲ ಅಲ್ಲಿ ಹಸಿರು ಪತ್ರದ ಹರವು ಬಿಳಿಯ ಹೂ ಹಬ್ಬ ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳ ಬಂದಿಯಗೆದ್ದು ಕ್ಷಣಕೊಂಡು ಮೊಗೆ ನೀರು ಹಿಗ್ಗಿ ಹೂವಲ್ಲಿ ಹೂವಾಗಿ ಕಾಯಾಗಿ ಎಷ್ಟು ಗಾದಿಯ ಚಂದ್ರ ಒಲೆಯೆದುರು ಹೋಳಿಗೆಯ ಸಂಭ್ರಮ ಸತಿ ಸಾವಿತ್ರಿ, ಜಾನಕಿ ಊರ್ಮಿಳೆಯಂತೆ ಚರಿತ್ರೆ ಪುಸ್ತಕದ ಶಾಂತ ಶ್ವೇತ ಗಂಭೀರೆಯಂತೆ ಗಾಂಧಿಜೀ ರಾಮಕೃಷ್ಣರ ಸತಿಯಂತೆ ಚಿಕ್ಕ ಮಕ್ಕಳ ಹೊತ್ತು ಅಪ್ಪನಿಗೆ ಅಂಜುತ್ತಾ ಬದುಕ ಸವಿಸಿದಳು. ಸಣ್ಣತನ ಕೊಂಕು ಕೆರೆದಾಟ ಏನೊಂದೂ ತೋರದೇ ಎಲ್ಲದಕ್ಕೂ ಮನೆತನದ ಉದ್ಧಾರ ಸೂತ್ರ ನನ್ನವ್ವ ಬುದುಕಿದ್ದು ಮನೆಯ ಕೆಲಸ ಕಾರ್ಯಕ್ಕೆ ಮಕ್ಕಳ ಎತ್ತರಕ್ಕೆ ಮೇಲೊಂದು ಸೂರು ಅನ್ನ ರೊಟ್ಟಿ ದಾಸೋಹಕ್ಕೆ ಸರಿಕರ ಎದುರು ತಲೆಯತ್ತಿ ನಡೆಯಲಿಕ್ಕೆ ಇವಳಿಗೆ ಮೆಚ್ಚುಗೆ ಕೃತಜ್ಞತೆಯ ಕಣ್ಣೀರು, ಹೆತ್ತದ್ದಕ್ಕೆ ಸಾಕಿದ್ದಕ್ಕೆ ಮನೆಯಿಂದ ಹೊರಬರದಂತೆ ನಮ್ಮೆಲ್ಲರನ್ನೂ ಒಂದೇ ನೌಕೆಯಲ್ಲಿ ಕೂಡಿಸಿಕೊಂಡು ಹೋಗಿದ್ದಕ್ಕೆ ಕೃತಜ್ಞತೆಯ ಕಣ್ಣೀರು ಇವಳ ದೈವೀ ಗುಣಕ್ಕೆ ನನ್ನವ್ವ ಎಂಥವರಿಗೂ ಅನುಕರಣೀಯ ದೀಪವಾಗಿದ್ದಕ್ಕೆ ತಣ್ಣಗೆ ಮೌನದಲ್ಲೇ ಹೊರಟು ಹೋದದಕ್ಕೆ.. *ಲೇಖನ* *ಜಿ.ಬಿ.ಹಾವಣಗಿ ಶಿಕ್ಷಕರು 9916066860..*
© ASK News Kannada. All Rights Reserved. Designed by AGScurate IT Solutions LLP