ಗದಗ, ಮೇ. 3 : ಮಗನು ತಂದೆಯ ಅಸ್ತಿತ್ವದ ಮುಂದುವರಿಕೆಯ ವಾರಸುದಾರನಾಗಿದ್ದನ್ನು ಮಕ್ಕಳು ಮರೆಯಬಾರದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ ಸಚಿವ ಎಚ್ಕೆ ಪಾಟೀಲ ಹೇಳಿದರಲ್ಲದೆ ಮಗನು ತಂದೆಯ ಪ್ರತಿರೂಪ ಎಂದರು. ಅವರು ಐತಿಹಾಸಿಕ ಲಕ್ಕುಂಡಿ ಗ್ರಾಮದ ಹೊರವಲಯದಲ್ಲಿ ಜಿಲ್ಲಾ ಪಂಚಾಯತ ಮಾಜಿ ಅಧ್ಯಕ್ಷ ಸಿದ್ದು ಪಾಟೀಲರು ತಮ್ಮ ತಂದೆಯ ಹೆಸರಲ್ಲಿ ನಿರ್ಮಿಸಿದ ದಿ.ಅಜ್ಜಣ್ಣ.ಕೆ.ಪಾಟೀಲ ಶಾಂತಿವನ ಉದ್ಘಾಟಿಸಿ, ದಿ.ಅಜ್ಜಣ್ಣ ಪಾಟೀಲ ಮತ್ತು ರೇಣುಕಾ ಅಜ್ಜಣ್ಣ ಪಾಟೀಲರ ಗದ್ದುಗೆಗೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಸಚಿವ ಎಚ್ಕೆ ಪಾಟೀಲರು ಮಗ ತಂದೆಯ ಪ್ರತಿರೂಪ ಎಂಬುದು ಕೇವಲ ದೈಹಿಕ ಹೋಲಿಕೆಯಲ್ಲ, ಅದೊಂದು ಆಳವಾದ ಭಾವನಾತ್ಮಕ ಮತ್ತು ಅನುವಂಶೀಯ ಬಂಧನವಾಗಿದೆ ಎಂದರು. ತಂದೆಯಂತೆ ಸಿದ್ದು ಪಾಟೀಲರು ನಡೆ-ನುಡಿಗಳ ಜೊತೆ ತಂದೆಯ ಸಾಮಾಜಿಕ, ರಾಜಕೀಯ, ಧಾರ್ಮಿಕ, ಕೌಟುಂಬಿಕ, ಶೈಕ್ಷಣಿಕ, ವ್ಯವಹಾರಿಕ ಚಿಂತನೆಯನ್ನು ಹೊಂದಿದ್ದು ಹೆಮ್ಮೆ ಎನಿಸುತ್ತದೆ ಎಂದರು. ತಂದೆಯ ಗುಣಲಕ್ಷಣಗಳು, ಸ್ವಭಾವಗಳು ಮಗನಿಗೆ ಅನುವಂಶೀಯವಾಗಿ ಬರುತ್ತವೆ ಎಂಬುದು ಸಿದ್ದು ಪಾಟೀಲರ ನಡುವಳಿಕೆ ಸ್ಪಷ್ಟಪಡಿಸುತ್ತದೆ ಎಂದರಲ್ಲದೆ ತಂದೆಯ ಹೆಸರಲ್ಲಿ ಶಾಂತಿವನ ಮತ್ತು ಶಾಂತಿವನದಲ್ಲಿ ತಂದೆ ತಾಯಿಯ ಗದ್ದುಗೆ ನಿರ್ಮಿಸುವ ಮೂಲಕ ತಂದೆ-ತಾಯಿಯ ಮತ್ತು ಪೂರ್ವಜರ ಅಸ್ತಿತ್ವ ಉಳಿಸಿ ಬೆಳೆಸಿಕೊಂಡು ಹೋಗುತ್ತಿರುವುದು ಕುಟುಂಬದ ಆದರ್ಶತೆಗೆ ಸಾಕ್ಷಿಯಾಗಿದೆ ಎಂದರು. 6 ಎಕರೆ ಪಿತ್ರಾರ್ಜಿತ ಆಸ್ತಿಯನ್ನು ಹಾಳು ಮಾಡದೆ ತಂದೆಯ ಹೆಸರಲ್ಲಿ ಶಾಂತಿವನ ರೂಪಿಸಿರುವ ಸಿದ್ದು ಪಾಟೀಲ ವನದಲ್ಲಿ(ತೋಟ) 3 ಬೋರುಗಳನ್ನು ತೆಗೆದು ತೋಟದ ಬಾವಿಯನ್ನು ಬಳಸಿಕೊಂಡು ಅಡಿಕೆ, ಪಪ್ಪಾಯ, ಬಾಳಿ, ಗಂಧ, ನೆರಳೆ, ದ್ರಾಕ್ಷಿ, ಮಹಾಗಣಿ, ಆಬಾಲಿ, ಮಲ್ಲಿಗೆ, ಸೇವಂತಿಗೆ ಹೂವು ಬೆಳೆಯುವ ಮೂಲಕ ತಂದೆಯಂತೆ ಅನುಕರಣೀಯ ಕೃಷಿಕರಾಗಿ ಸಿದ್ದು ಪಾಟೀಲ ಕಾಣಿಸಿದ್ದಾರೆ ಎಂದರು. ತಂದೆಯು ಕುಟುಂಬದ ಹೊಣೆಗಾರಿಕೆ, ನೈತಿಕ ಮೌಲ್ಯಗಳನ್ನು ಕಲಿಸುವುದರಿಂದ ಮಗನು ಆ ಹಾದಿಯಲ್ಲೇ ಸಾಗುತ್ತಾನೆ ಎಂಬುದಕ್ಕೆ ಸಿದ್ದು ಪಾಟೀಲ ಸಾಕ್ಷಿಯಾಗಿದ್ದಾರೆ ಎಂದರು. ತಂದೆ-ಮಗನ ನಡುವಿನ ಪ್ರೀತಿ ಮತ್ತು ಗೌರವವು ಅಪರೂಪದ, ಹೃದಯಸ್ಪರ್ಶಿ ಬಾಂಧವ್ಯವಾಗಿದ್ದು ಇದನ್ನು ಅರಿತುಕೊಂಡರೆ ಕೌಟುಂಬಿಕ ನೆಲೆಗಟ್ಟು ಇನ್ನಷ್ಟು ಗಟ್ಟಿಯಾಗುತ್ತದೆ ಎಂದರು. ವೇದಿಕೆಯ ಮೇಲೆ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಜನಪ್ರಿಯ ಮಾಜಿ ಶಾಸಕರಾದ ಡಿ.ಆರ್.ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಪ್ರಭು ಬುರಬುರೆ, ಕಾಂಗ್ರೆಸ್ ನಾಯಕ ದಶರಥ ಗಾಣಿಗೇರ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಉಪಸ್ಥಿತರಿದ್ದರು.
© ASK News Kannada. All Rights Reserved. Designed by AGScurate IT Solutions LLP