ಗದಗ, ಮೇ, 06 : ಐದು ರಾಜ್ಯಗಳ ಚುನಾವಣೆಯ ಫಲಿತಾಂಶದಲ್ಲಿ ಕೇವಲ ಕೇರಳ ರಾಜ್ಯದಲ್ಲಿ ಅನಿವಾರ್ಯವಾಗಿ ಗೆದ್ದಿರುವ ಕಾಂಗ್ರೆಸ್ ಪಕ್ಷದ ಸಾಧನೆ ದೊಡ್ಡದಾಗಿ ಬಿಂಬಿಸುತ್ತಾ ವಿಜಯೋತ್ಸವ ಆಚರಿಸುತ್ತಿರುವ ಕಾಂಗ್ರೆಸ್ಸಿಗರು ವಿಜಯೋತ್ಸವ ಬಿಟ್ಟು ಶೋಕಾಚರಣೋತ್ಸವ ಆಚರಿಸಬೇಕೆಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತಾರ ವೆಂಕನಗೌಡ ಆರ್. ಗೋವಿಂದಗೌಡ್ರ ಲೇವಡಿ ಮಾಡಿದ್ದಾರೆ. ದೇಶದಲ್ಲಿ ಅದೋಗತಿಗೆ ಸಾಗಿರುವ ಕಾಂಗ್ರೆಸ್ ಪಕ್ಷದ ಸ್ಥಿತಿ ನೋಡಿದಾಗ ಕಾಂಗ್ರೆಸ್ಸಿಗರು ವಿಜಯೋತ್ಸವ ಬದಲು ಶೋಕಾಚರಣೋತ್ಸವ ಆಚರಿಸಬೇಕಿತ್ತು ಎಂದು ವೆಂಕನಗೌಡ ಆರ್. ಗೋವಿಂದಗೌಡ್ರ ವ್ಯಂಗ್ಯವಾಡಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬೆರಳೆಣಿಕೆಯ ಸ್ಥಾನಗಳನ್ನು ಗೆದ್ದು ಅಸ್ಸಾಂ ಹಾಗೂ ಪುದುಚೇರಿಯಲ್ಲಿ ಇದ್ದ ಅಧಿಕಾರವನ್ನು ಕಳೆದುಕೊಂಡು ಹೇಳಲು ಹೆಸರಿಲ್ಲದಂತಾಗಿರುವ ಕಾಂಗ್ರೆಸ್ ಪಕ್ಷವು ವಿಜಯೋತ್ಸವ ನಡೆಸಿದ್ದು ವಿಚಿತ್ರ ಎನಿಸುತ್ತಿದೆ ಎಂದಿದ್ದಾರೆ. ಆಡಳಿತ ವಿರೋಧಿ ಅಲೆಯ ಹಿನ್ನಲೆಯಲ್ಲಿ ಕೇರಳದ ರಾಜ್ಯದ ಮತದಾರರು ಅನಿವಾರ್ಯವಾಗಿ ಬೇರೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾರೆಯೇ ಹೊರತು ಕಾಂಗ್ರೆಸ್ ಮೇಲಿನ ಪ್ರೀತಿಗಲ್ಲ ಎಂದು ಗೋವಿಂದಗೌಡ್ರ ಟೀಕಿಸಿದ್ದಾರೆ. ಇಂಡಿ ಮೈತ್ರಿ ಕೂಟದ ಮಿತ್ರ ಪಕ್ಷ ಡಿಎಂಕೆ ಪಕ್ಷಕ್ಕೆ ಚೂರಿ ಹಾಕಿರುವ ಕಾಂಗ್ರೆಸ್ ಪಕ್ಷವು ತಮಿಳುನಾಡಿನ ಪ್ರಾದೇಶಿಕ ಪಕ್ಷ ಟಿವಿಕೆ ಪಕ್ಷಕ್ಕೆ ಬೆಂಬಲ ಘೋಷಿಸಿದ್ದು ಕಾಂಗ್ರೆಸ್ಸ್ ಸ್ಥಿತಿ ಹೇಗಿದೆ ಎಂಬುದು ಎತ್ತಿ ತೋರುತ್ತದೆ ಎಂದು ವೆಂಕನಗೌಡ ಆರ್. ಗೋವಿಂದಗೌಡ್ರ ಕುಟುಕಿದ್ದಾರೆ.
© ASK News Kannada. All Rights Reserved. Designed by AGScurate IT Solutions LLP