ಗದಗ,ಮೇ,11 : ಕಳೆದ 8 ದಿನಗಳ ಹಿಂದೆ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಡ್ಯಾನ್ಸಿಂಗ್ ಪ್ಲೇ ಯಂತ್ರದ ಬೇರಿಂಗ್ ತುಂಡಾಗಿ ಬಿದ್ದ ಘಟನೆಯಲ್ಲಿ ಗಾಯಗೊಂಡಿದ್ದ 21 ಗಾಯಾಳುಗಳಿಗೆ ಚಿಕಿತ್ಸಾ ವೆಚ್ಛ ಅಥವಾ 50 ಸಾವಿರ ರೂ.ಪರಿಹಾರವನ್ನು ಸರಕಾರ ಘೋಷಿಸಿದೆ. ತೋಂಟದಾರ್ಯ ಮಠದ ಜಾತ್ರೆಯಲ್ಲಿ ಡ್ಯಾನ್ಸಿಂಗ್ ಪ್ಲೇ ಯಂತ್ರದ ಬೇರಿಂಗ್ ತುಂಡಾಗಿ ಬಿದ್ದ ಘಟನೆಯಲ್ಲಿ ಗಾಯಗೊಂಡು ಚಿಕತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಸೋಮವಾರ ಭೇಟಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರ, ಪ್ರವಾಸೋದ್ಯಮ, ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ಕೆ ಪಾಟೀಲರು ಗಾಯಾಳುಗಳ ಸ್ಥಿತಿಗತಿ ಅವಲೋಕಿಸಿ, ಅವರನ್ನು ಸಂತೈಸಿ ದೈರ್ಯ ಹೇಳಿದರಲ್ಲದೆ ಚಿಕಿತ್ಸೆ ಮತ್ತು ಪರಿಹಾರದ ಭರವಸೆ ನೀಡಿದರು. ಕೂಡಲೇ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಬರೆದು ಗಾಯಾಳುಗಳ ಸ್ಥಿತಿಗತಿಯನ್ನು ವಿವರಿಸಿ ಚಿಕಿತ್ಸೆಗಾಗಿ ಆರ್ಥಿಕ ನೆರವು ಅಗತ್ಯವಿದ್ದು ಈ ಘಟನೆಯನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ತಮ್ಮ ಪರಿಹಾರ ನಿಧಿಯಿಂದ ಗರಿಷ್ಠ ಪ್ರಮಾಣದ ಪರಿಹಾರ ಮಾಡುವಂತೆ ಕೋರಿದ್ದರು. ಸಚಿವ ಎಚ್ಕೆ ಪಾಟೀಲರ ಕೋರಿಕೆ ಪತ್ರಕ್ಕೆ ತಕ್ಷಣವೆ ಸ್ಪಂದಿಸಿದ ಸಿಎಂ ಸಿದ್ರಾಮಯ್ಯನವರು ಎಚ್ಕೆ ಪಾಟೀಲರ ಮನವಿಯ ಪತ್ರದ ಮೇಲೆಯೇ ಚಿಕಿತ್ಸಾ ವೆಚ್ಚ ಅಥವಾ ಗರಿಷ್ಠ 50,000 ರೂಗಳನ್ನು ಮಂಜೂರು ಮಾಡಿದೆ ಎಂದು ಸಿಎಂ ಸಿದ್ರಾಮಯ್ಯ ಬರೆದು ಸಹಿ ಮಾಡಿದ್ದು ಸಚಿವ ಎಚ್ಕೆ ಪಾಟೀಲರ ಪ್ರಭಾವ ಸ್ಪಷ್ಟಪಡಿಸುತ್ತಿದೆ. ತೋಂಟದಾರ್ಯ ಮಠದ ಜಾತ್ರೆಯಲ್ಲಿ ನಡೆದ ಈ ಅವಘಡಕ್ಕೆ ತುತ್ತಾದ ಅಸಹಾಯಕ ಗಾಯಾಳುಗಳಿಗೆ ಸಚಿವ ಎಚ್ಕೆ ಪಾಟೀಲರ ಸರಕಾರದಿಂದ ನೆರವು ಕೊಡಿಸಿದ್ದು ಗಾಯಾಳುಗಳ ಕುಟುಂಬ ಒಂದಿಷ್ಟು ನಿಟ್ಟೂಸಿರು ಬಿಡುವಂತಾಗಿದೆ. ಮಠದಿಂದ ಮತ್ತು ಜಾತ್ರೆಯಲ್ಲಿಯ ಅಂಗಡಿಗಳ ಗುತ್ತಿಗೆದಾರನಿಂದ ಗಾಯಾಳುಗಳಿಗೆ ಏನು ಪರಿಹಾರ ಎಂಬ ಪ್ರಶ್ನೆ ಚರ್ಚೆಗೆ ಬಂದಿದೆ.
© ASK News Kannada. All Rights Reserved. Designed by AGScurate IT Solutions LLP