ಗದಗ, ಜು.೧ : ಪತ್ರಿಕೋದ್ಯಮವು ಸಾಂಪ್ರದಾಯಿಕ ಮುದ್ರಣ ಮಾಧ್ಯಮದಿಂದ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳತ್ತ ವೇಗವಾಗಿ ಸಾಗುತ್ತಿದೆಯಾದರು ಪ್ರಸ್ತುತ ಯುಗದಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಬಳಕೆಯಿಂದಾಗಿ ವಿಶ್ವಾಸಾರ್ಹತೆ ಕಾಪಾಡಿಕೊಳ್ಳುವುದು ದೊಡ್ಡ ಸವಾಲುಗಳಾಗಿ ಮಾರ್ಪಟ್ಟಿದೆ ಎಂದು ಹಿರಿಯ ಪತ್ರಕರ್ತ ಅನಂತ ಎಸ್.ಕಾರ್ಕಳ ಅಭಿಪ್ರಾಯಪಟ್ಟರು. ನಗರದ ಖಾಸಗಿ ಹೊಟೇಲದಲ್ಲಿ ಹಿರಿಯ ಪತ್ರಕರ್ತ ಎಚ್.ಎಂ.ಶರೀಫನವರ ಹುಟ್ಟು ಹಬ್ಬದ ನಿಮಿತ್ಯ ಅವರ ಆಪ್ತ ಬಳಗ ಹಮ್ಮಿಕೊಂಡಿದ್ದ ಪತ್ರಿಕಾ ದಿನಾಚರಣೆ ಉದ್ದೇಶಿಸಿ ಮಾತನಾಡಿದರು. ಸಾಮಾಜಿಕ ಜಾಲತಾಣಗಳಾಗಿರುವ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಂತಹ ಪ್ಲಾಟ್‌ಫಾರ್ಮ್‌ಗಳು ಜನರನ್ನು ತನ್ನತ್ತ ಸೆಳೆದುಕೊಳ್ಳುತ್ತಿರುವದರಿಂದ ಮುಖ್ಯ ಮಾಧ್ಯಮಗಳು ಜನರಿಂದ ದೂರಾಗುತ್ತಿರುವುದು ಮಾಧ್ಯಮ ಲೋಕಕ್ಕೆ ಬಹುದೊಡ್ಡ ಕೊಡಲಿ ಪೆಟ್ಟು ಬಿದ್ದಂತಾಗಿದೆ ಎಂದರು. ಹಿರಿಯ ಪತ್ರಕರ್ತ ಆನಂದ ಸಾಲಿಗ್ರಾಮ ಮಾತನಾಡಿ ಬಹುತೇಕ ಸುದ್ದಿ ಸಂಸ್ಥೆಗಳು ಈಗ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಆದ್ಯತೆ ನೀಡುತ್ತಿರುವುದರಿಂದ ಓದುಗರು ಪತ್ರಿಕೆಗಳಿಗಿಂತ ಮೊಬೈಲ್ ಆಪ್‌ಗಳು ಮತ್ತು ವೆಬ್‌ಸೈಟ್‌ಗಳ ಮೂಲಕ ಸುದ್ದಿಯನ್ನು ಪಡೆಯುತ್ತಿರುವುದು ಮಾಧ್ಯಮ ವ್ಯವಸ್ಥೆಯನ್ನು ಕಡೆಗಣಿಸಿದಂತಹ ಸಂದರ್ಭ ಕಾಣಲಾಗುತ್ತಿದೆ ಎಂದರು. ಸುದ್ದಿ ಸಂಸ್ಥೆಗಳು ರೀಲ್ಸ್ ಮತ್ತು ಸಣ್ಣ ವಿಡಿಯೋಗಳ ಮೂಲಕ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದ್ದು ಮಾಧ್ಯಮಕ್ಕೆ ಪೆಟ್ಟು ಬೀಳುವಂತಾಗಿದೆ ಎಂದರು. ಟಿ.ವಿ.9 ಜಿಲ್ಲಾ ವರದಿಗಾರ ಸಂಜಯ್ ಪಾಂಡ್ರೆ ಮಾತನಾಡಿ ವರದಿಗಳನ್ನು ಬರೆಯಲು ಮತ್ತು ವಿಷಯಗಳನ್ನು ವಿಶ್ಲೇಷಿಸಲು AI ಬಳಕೆ ಹೆಚ್ಚಾಗಿದ್ದರಿಂದ ಸತ್ಯಾಸತ್ಯತೆ ಅರ್ಥವಾಗದಂತಾಗಿದೆ ಎಂದರು. ಜನಶ್ರೀ ಟೈಮ್ಸ್ ಸಂಪಾದಕ ಆನಂದಯ್ಯ ವಿರಕ್ತಿಮಠ ಮಾತನಾಡಿ AI ಇದು ನಕಲಿ ಸುದ್ದಿಗಳ (Fake News) ಹಾವಳಿಯನ್ನು ಹೆಚ್ಚಿಸುವ ಮತ್ತು ಪತ್ರಕರ್ತರ ಉದ್ಯೋಗಕ್ಕೆ ಕುತ್ತು ತರುವ ಆತಂಕವನ್ನುಂಟು ಮಾಡಿದೆ ಎಂದರು. ಡಿಜಿಟಲ್ ಮಾಧ್ಯಮದಲ್ಲಿ ಜಾಹೀರಾತುಗಳ ಆದಾಯವು ಗೂಗಲ್ ಮತ್ತು ಮೆಟಾದಂತಹ ಟೆಕ್ ದೈತ್ಯರ ಪಾಲಾಗುತ್ತಿರುವುದರಿಂದ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಸಂಕಷ್ಟ ಎದುರಿಸುವಂತಾಗಿದೆ ಎಂದು ಗದಗ ಜಿಲ್ಲೆಯ ಬಹುತೇಕ ಪತ್ರಿಕೆಗಳ ಕಾನೂನು ಸಲಹೆಗಾರರು, ನ್ಯಾಯವಾದಿ ಟಿ.ಎನ್.ಭಾಂಡಗೆ ಕಳವಳ ವ್ಯಕ್ತಪಡಿಸಿದರು. ಸುದ್ದಿ ಸಂಸ್ಥೆಗಳು ‘ಪೇವಾಲ್’ (Paywalls) ಮತ್ತು ಚಂದಾದಾರಿಕೆ ಮಾದರಿಗಳನ್ನು ಅವಲಂಬಿಸಬೇಕಾಗಿದ್ದು ಪತ್ರಿಕೋದ್ಯಮ ಮತ್ತು ಮಾಧ್ಯಮಗಳ ಇಂದಿನ ಸ್ವರೂಪ ಮತ್ತು ಸವಾಲುಗಳ ಬಗ್ಗೆ ಸರಕಾರ ಮತ್ತು ಸಾರ್ವತ್ರಿಕವಾಗಿ ಬಹುದೊಡ್ಡ ಚರ್ಚೆ ಆಗಬೇಕಾದ ಅಗತ್ಯತೆ ಇದೆ ಎಂದು ಹಿರಿಯ ಪತ್ರಕರ್ತ ಎಚ್.ಎಂ.ಶರೀಫನವರ ಹೇಳಿದರಲ್ಲದೆ ಪತ್ರಿಕಾ ದಿನಾಚರಣೆಯ ಅರ್ಥಪೂರ್ಣ ಆಚರಣೆಯ ಸಂದರ್ಭ ತಮ್ಮ ಹುಟ್ಟು ಹಬ್ಬ ಆಚರಿಸುವ ಮೂಲಕ ಗೌರವಿಸಿದ ಪ್ರತಿಯೊಬ್ಬ ಪತ್ರಕರ್ತರಿಗೂ ಹೃದಯಪೂರ್ವಕವಾಗಿ ಅಭಿನಂದಿಸುವುದಾಗಿ ತಿಳಿಸಿದರು. ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಶರಣು ದೊಡ್ಡೂರ ಸರ್ವರನ್ನು ಸ್ವಾಗತಿಸಿದರು. ಗಣೇಶ ಪೈ ಕಾರ್ಯಕ್ರಮ ನಿರೂಪಿಸಿದರು. ನ್ಯೂಸ್ 18 ಜಿಲ್ಲಾ ವರದಿಗಾರ ಸಂತೋಷ ಕೊಣ್ಣೂರ ವಂದಿಸಿದರು. ನ್ಯೂಸ್ ಫಸ್ಟ್ ಜಿಲ್ಲಾ ವರದಿಗಾರ ಸುರೇಶ ಕಡ್ಲಿಮಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸುವರ್ಣ ಟಿ.ವಿ.ಜಿಲ್ಲಾ ವರದಿಗಾರ ಗಿರೀಶ ಕಮ್ಮಾರ, ರಿಪಬ್ಲಿಕ್ ಟಿ.ವಿ. ವರದಿಗಾರ ಮಂಜು ಪತ್ತಾರ, ಕ್ಯಾಮೆರಾಮೆನ್ ಮಂಜು ಸಾಳೇರ, ಶಂಭುಲಿಂಗಯ್ಯ ಹಾಗೂ ವಿಜಯಸಾಕ್ಷಿ ವರದಿಗಾರ ಗೌಸ್ ಬೆಟಗೇರಿ, ಸ್ನೇಹ ಸುದ್ದಿ ಸಂಪಾದಕ ಗಣೇಶ ದೊಡ್ಡಮನಿ, ಪರಶುರಾಮ ಸೇರಿದಂತೆ ಇತರರು ಉಪಸ್ಥಿತರಿದ್ದರು.
© ASK News Kannada. All Rights Reserved. Designed by AGScurate IT Solutions LLP