ಲಕ್ಕುಂಡಿ (ಗದಗ) ಆ, 12 : *ಗ್ರಾಮಸ್ಥರ ಧರಣಿಗೆ ಮಣಿದು ತಮ್ಮನ್ನು ಲಕ್ಕುಂಡಿ ಗ್ರಾಪಂ ಸೇವೆಯಿಂದ ಬಿಡುಗಡೆಗೊಳಿಸುವಂತೆ PDO ಅಮಿರನಾಯಕ, ಆಡಳಿತಾಧಿಕಾರಿ ಶರಣು ಗೋಗೇರಿಯವರು ಗದಗ ಜಿಲ್ಲಾ ಪಂಚಾಯತ ಸಿಇಓಗೆ ಸ್ವಯಂ ಪ್ರೇರಿತವಾಗಿ ಪತ್ರ ಬರೆದ ಘಟನೆ ಬುಧವಾರ ನಡೆದಿದೆ..* ಜವಾಬ್ದಾರಿಯುತ ಆಡಳಿತ ನಡೆಸದೆ ಇರುವ ಲಕ್ಕುಂಡಿ ಗ್ರಾಮ ಪಂಚಾಯತಿ PDO ಅಮಿರನಾಯಕ ಮತ್ತು ಆಡಳಿತಾಧಿಕಾರಿ ಶರಣು ಗೋಗೇರಿ ಅವರುಗಳನ್ನು ವರ್ಗಾವಣೆಗೊಳಿಸ ಬೇಕೆಂದು ಪಟ್ಟು ಹಿಡಿದು ಲಕ್ಕುಂಡಿ ಗ್ರಾಮ ಪಂಚಾಯತಿ ಮುಂದೆ ಕಳೆದ 3 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ ಗ್ರಾಮಸ್ಥರಿಗೆ ಕೊನೆಗೂ ಬುಧವಾರ ಯಶಸ್ಸು ಸಿಕ್ಕಂತಾಗಿದೆ. ಜಿಲ್ಲೆಯಲ್ಲಿ ಅತೀ ದೊಡ್ಡ ಗ್ರಾಮ ಹಾಗೂ ಪ್ರಥಮ ದರ್ಜೆ ಪಂಚಾಯತಿ ಎನಿಸಿರುವ ಐತಿಹಾಸಿಕ ಲಕ್ಕುಂಡಿ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸುವಲ್ಲಿ ಆಡಳಿತಾಧಿಕಾರಿಗಳು ಮತ್ತು PDO ವಿಫಲರಾಗಿರುವುದರಿಂದ ಕೂಡಲೆ ಅವರನ್ನು ಪಂಚಾಯತಿ ಹುದ್ದೆಯಿಂದ ಬಿಡುಗಡೆಗೊಳಿಸಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯತಿ ಮುಂದೆ ಗ್ರಾಮಸ್ಥರು ಧರಣಿ ಸತ್ಯಾಗ್ರಹ ನಡೆಸಿದ್ದರು. ಅಸಮರ್ಪಕ ಕುಡಿಯುವ ನೀರು, ಆಸ್ವಚ್ಛತೆ, ಸಾರ್ವಜನಿಕ ವಿದ್ಯುತ್, ಪಂಚಾಯತಿ ಸಿಬ್ಬಂದಿಯ ಮೇಲೆ ಹಿಡಿತ ಇಲ್ಲದಿರುವುದು, ಸಮಯಕ್ಕೆ ಸರಿಯಾಗಿ ಸಾರ್ವಜನಿಕರಿಗೆ ಸಿಗದೇ ಇರುವುದು, ಪ್ರಮುಖವಾಗಿ ಸಾರ್ವಜನಿಕರ ಜತೆ ಅಸಹನೀಯ ವರ್ತನೆ ತೋರುವ ವಾಲ್ಮನ್ ಮೇಲೆ ಕ್ರಮ ಜರುಗಿಸದೆ ಇರುವುದು ಸೇರಿದಂತೆ ಗ್ರಾಮದ ಸಾರ್ವತ್ರಿಕ ಸಮಸ್ಯೆಗಳಿಗೆ ಸ್ಪಂಧಿಸದೆ ಇರುವ PDO ಮತ್ತು ಆಡಳಿತಾಧಿಕಾರಿಗಳನ್ನು ಬದಲಾವಣೆ ಮಾಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ 7 ದಿನವಾದರೂ ಕ್ರಮ ಜರುಗಿಸದೆ ಇರುವುದರಿಂದ ಬದಲಾವಣೆಗೆ ಆಗ್ರಹಿಸಿ ಅನಿವಾರ್ಯವಾಗಿ ಲಕ್ಕುಂಡಿ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಪ್ರತಿಭಟನೆ ರೂವಾರಿಗಳಾದ ಗದಗ ತಾ.ಪಂ. ಮಾಜಿ ಅಧ್ಯಕ್ಷ ಎಂ. ಎನ್. ಉಮಚಗಿ, ತಾ.ಪಂ ಮಾಜಿ ಸದಸ್ಯ ಮಹೇಶ ಮುಸ್ಕಿನಭಾವಿ, ನಜೀರಅಹ್ಮದ ಕಿರಿಟಗೇರಿ, ಗ್ರಾ.ಪಂ. ಮಾಜಿ ಸದಸ್ಯ ಬಿ.ಬಿ.ಮಾಡಲಗೇರಿ, ಶಿವಪ್ಪ ಸಜ್ಜನರ ಅವರು ಹೇಳಿದರು. ಇದಕ್ಕೂ ಪೂರ್ವ ಪ್ರತಿಭಟನಾಕಾರರು ಅಸರ್ಮಪಕ ನೀರು ಪೂರೈಕೆ ಹಾಗೂ ಸ್ವಚ್ಛತೆ ಕುರಿತು ಆಡಳಿತಾಧಿಕಾರಿ ಶರಣು ಗೋಗೇರಿ ಮತ್ತು ಪಿಡಿಓ ಅಮಿರನಾಯಕ ಅವರ ಜತೆ ಮಾತಿನ ಚಕಮಕಿ ನಡೆಯಿತು. ಕುಡಿಯುವ ನೀರು, ಸ್ವಚ್ಛತೆಯ ಕುರಿತು ಸಿಬ್ಬಂದಿಯ ಜತೆ ಈಗಾಗಲೇ ಚರ್ಚಿಸಲಾಗಿದ್ದು ಇನ್ನು ಮುಂದೆ ಸಮರ್ಪಕವಾಗಿ ಮೂಲಭೂತ ಸೌಲಭ್ಯ ಒದಗಿಸಲು ಸಿಬ್ಬಂದಿ ಮೇಲೆ ದಿಟ್ಟ ಕ್ರಮ ಕೈಗೊಳ್ಳಲಾಗುವುದು, ಪ್ರತಿಭಟನೆಯನ್ನು ಕೈಬಿಡಬೇಕೆಂದು ಆಡಳಿತಾಧಿಕಾರಿ ಶರಣು ಗೋಗೇರಿ, PDO ಅಮಿರನಾಯಕ ವಿನಂತಿಸಿದಾಗಲೂ ಪಟ್ಟು ಬಿಡದ ಪ್ರತಿಭಟನಾಕಾರರಿಗೆ ಮಣಿದು ತಮ್ಮನ್ನು ಲಕ್ಕುಂಡಿ ಗ್ರಾಪಂ ಹುದ್ದೆಗಳಿಂದ ಬಿಡುಗಡೆಗೊಳಿಸಲು ಶರಣು ಗೋಗೇರಿ ಮತ್ತು PDO ಅಮಿರನಾಯಕ ಸ್ವಯಂ ಪತ್ರವನ್ನು ಬರೆದು ಸಿಇಓಗೆ ಮನವಿ ಮಾಡಿದ್ದಾರೆ. ಗದಗ ತಾ.ಪಂ AEE ಅಧಿಕಾರಿ ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರನ್ಬು ಸಮಾಧಾನಗೊಳಿಸಲು ಪ್ರಯತ್ನಿಸಿದಾಗಲೂ ಸಹ ಬದಲಾವಣೆ ಆಗುವವರೆಗೆ ಪ್ರತಿಭಟನೆ ನಿಲ್ಲದು ಎಂದು ಹಠ ಹಿಡಿದ ಗ್ರಾಮಸ್ಥರನ್ನು ಸಮಾಧಾನಗೊಳಿಸಲು ಆಡಳಿತಾಧಿಕಾರಿ ಮತ್ತು PDO ಸ್ವಯಂ ಪ್ರೇರಿತರಾಗಿ ತಮ್ಮನ್ನು ಬಿಡುಗಡೆಗೊಳಿಸಲು ಜಿಪಂ ಸಿಇಓಗೆ ಪತ್ರ ಬರೆದ ನಂತರವೇ ಪ್ರತಿಭಟನಾಕಾರರು ತಮ್ಮ ಪ್ರತಿಭಟನೆಯನ್ನು ಕೈಬಿಟ್ಟಿದ್ದು ವಿಶೇಷ ಎನ್ನುವಂತಾಗಿದೆ. ಪ್ರತಿಭಟನೆಯಲ್ಲಿ ಅಶೋಕ ಮೇಟಿ, ಬಸವರಾಜ ಮುಳ್ಳಾಳ, ಬಸವರಾಜ ಕವಲೂರು, ಅಶೋಕ ಗದಗಿನ, ಪ್ರವೀಣ ಕಲಾಲ ವಿನಾಯಕ ಡಿಗ್ಗಾವಿ, ಚಂದ್ರು ಚಬ್ಬರಭಾವಿ, ಪ್ರಶಾಂತ ಬಟ್ಟೂರ, ವೀರಣ್ಣ ಅರಹುಣಶಿ, ಮಲ್ಲಿಕಾರ್ಜುನ ರಾಯಚೂರು, ನಾಗರಾಜ ಜಾಡರ, ಮಹಮ್ಮದರಫೀಕ ಬೆಟಗೇರಿ, ರವಿ ಕವಲೂರು, ಕಲ್ಮೇಶ ಅಂಬಕ ಇತರರು ಇದ್ದರು.
© ASK News Kannada. All Rights Reserved. Designed by AGScurate IT Solutions LLP