ಗದಗ,ಸೆ.1: *ನರಗುಂದ, ರೋಣ ಹಾಗೂ ಗದಗ ತಾಲೂಕುಗಳನ್ನು ಬರ ಪೀಡಿತ ಪ್ರದೇಶಗಳೆಂದು ಘೋಷಿಸಲು ಸಿಎಂ ಡಿ.ಕೆ.ಶಿವಕುಮಾರವರಿಗೆ ಮಾಜಿ ಸಚಿವರು ಹಾಲಿ ಶಾಸಕರಾದ ಸಿ.ಸಿ.ಪಾಟೀಲರು ಪತ್ರದ ಮೂಲಕ ಒತ್ತಾಯಿಸಿದ್ದಾರೆ. ಸೆಪ್ಟೆಂಬರ್ 1 ರಂದು ಗದಗ ಜಿಲ್ಲೆಯಲ್ಲಿ ಬರಪೀಡಿತ ಪ್ರದೇಶಗಳ ವೀಕ್ಷಣೆ ಮತ್ತು ಬರಪೀಡಿಯ ವಿಷಯವಾಗಿ ಅಧಿಕಾರಿಗಳ ಸಭೆ ನಡೆಸಲಿರುವ ಸಿಎಂ ಡಿ.ಕೆ.ಶಿವಕುಮಾರ ಅವರಿಗೆ ಪತ್ರ ಬರೆಯುವ ಮೂಲಕ ಗಮನ ಸೆಳೆದಿದ್ದಾರೆ. *ಸಿ.ಸಿ.ಪಾಟೀಲರು ಬರೆದ ಪತ್ರದಲ್ಲಿ ಏನಿದೆ..?* ಗೆ, ಶ್ರೀಯುತ ಡಿ. ಕೆ. ಶಿವಕುಮಾರವರು ಸನ್ಮಾನ್ಯ ಮುಖ್ಯಮಂತ್ರಿಗಳು, ಕರ್ನಾಟಕ ಸರ್ಕಾರ. ಮಾನ್ಯರೇ, ನರಗುಂದ ವಿಧಾನಸಭಾ ಕ್ಷೇತ್ರದ ನರಗುಂದ, ರೋಣ ಹಾಗೂ ಗದಗ ತಾಲೂಕುಗಳ ವ್ಯಾಪ್ತಿಯಲ್ಲಿ ಮುಂಗಾರು ಹಂಗಾಮಿನಲ್ಲಿ ಸಮರ್ಪಕವಾಗಿ ಮಳೆ ಬಾರದೇ ಇರುವ ಹಿನ್ನೆಲೆಯಲ್ಲಿ ರೈತರು ಜಮೀನುಗಳಲ್ಲಿ ಭಿತ್ತನೆ ಮಾಡದೇ ಇರುವುದು ನನ್ನ ಗಮನಕ್ಕೆ ಬಂದಿರುತ್ತದೆ. ಅಲ್ಲದೇ ಅಲ್ಪ-ಸ್ವಲ್ಪ ಅಂದರೆ ಶೇ. 20-30 ರಷ್ಟು ರೈತರು ಭಿತ್ತನೆ ಮಾಡಿದ್ದು, ಸದರಿ ಬೆಳೆಗಳೂ ಸಹಿತ ಇಳುವರಿ ಬಾರದೇ ರೈತರು ಹಾಕಿದ ವೆಚ್ಚವೂ ಸಹಿತ ಬಾರದೇ ರೈತರೆಲ್ಲ ಸಂಕಷ್ಟಕ್ಕೀಡಾಗಿದ್ದಾರೆ. ಈ ಕುರಿತಾಗಿ ರಾಜ್ಯ ಸರ್ಕಾರದಿಂದ ಬರ ಪೀಡಿತ ಪ್ರದೇಶಗಳ ವೀಕ್ಷಣೆಗಾಗಿ ಶ್ರೀ ಬಸವರಾಜ ರಾಯರಡ್ಡಿ, ಮಾನ್ಯ ಉನ್ನತ ಶಿಕ್ಷಣ ಸಚಿವರು, ಕರ್ನಾಟಕ ಸರ್ಕಾರ ರವರ ನೇತೃತ್ವದಲ್ಲಿ ರೈತರ ಜಮೀನುಗಳಿಗೆ ಭೇಟಿ ನೀಡಿದಾಗ ಕೆಲವೊಂದು ಕಡೆಗಳಲ್ಲಿ ಹಸಿರು ಭೂಮಿ ಇದ್ದರೂ ಕೂಡ ಸರಿಯಾಗಿ ಬೆಳೆಗಳು ಬಾರದೇ ರೈತರು ಸಂಕಷ್ಟಕ್ಕೀಡಾಗಿರುವ ಪರಿಸ್ಥಿತಿ ಮಾನ್ಯ ಸಚಿವರ, ನನ್ನ ಹಾಗೂ ಅಧಿಕಾರಿಗಳ ಗಮನಕ್ಕೆ ಬಂದಿರುತ್ತದೆ. ಈ ಕುರಿತು ಸಭೆಯಲ್ಲಿ ಮಾನ್ಯ ಸಚಿವರು ಸರ್ಕಾರಕ್ಕೆ ಬರ ಪೀಡಿತ ಪ್ರದೇಶ ಎಂದು ಘೋಷಿಸುವಂತೆ ಶಿಫಾರಸ್ಸು ಮಾಡುವುದಾಗಿ ಹೇಳಿದ್ದು ಇರುತ್ತದೆ. ಆದರೆ ಸದ್ಯ ಘೋಷಿಸಿದ ಬರ ಪೀಡಿತ ಪ್ರದೇಶಗಳ ಪಟ್ಟಿಯಲ್ಲಿ ನನ್ನ ಮತಕ್ಷೇತ್ರದ ತಾಲೂಕುಗಳು ಸೇರ್ಪಡೆ ಆಗಿರುವುದಿಲ್ಲ. ತಾವುಗಳು ಈ ದಿಶೆಯಲ್ಲಿ ಈ ಭಾಗದ ರೈತರ, ಕೃಷಿ ಕಾರ್ಮಿಕರ ಹಿತದೃಷ್ಠಿಯಿಂದ ನರಗುಂದ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನರಗುಂದ, ರೋಣ ಹಾಗೂ ಗದಗ ತಾಲೂಕುಗಳನ್ನು ಕೂಡ ಬರ ಪೀಡಿತ ಪ್ರದೇಶಗಳೆಂದು ಘೋಷಿಸಲು ಈ ಮೂಲಕ ತಮ್ಮಲ್ಲಿ ವಿನಂತಿಸುತ್ತೇನೆ. ಗೌರವಗಳೊಂದಿಗೆ, ತಮ್ಮ ವಿಶ್ವಾಸಿ, (ಸಿ. ಸಿ. ಪಾಟೀಲ) ತಮ್ಮ ಪತ್ರಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸುವರೆಂಬ ವಿಶ್ವಾಸ ಸಿ.ಸಿ.ಪಾಟೀಲರು ವ್ಯಕ್ತಪಡಿಸಿದ್ದಾರೆ.
© ASK News Kannada. All Rights Reserved. Designed by AGScurate IT Solutions LLP