ಗದಗ, ಸೆ. 01: ನಾವು ಮಾರ್ಗಸೂಚಿ ಅನುಸಾರ ಬರ ಪ್ರದೇಶ ಘೋಷಣೆ ಮಾಡಬೇಕಾಗಿದ್ದು ಅದರನ್ವಯ ಅಧ್ಯಯನ ಮಾಡಿ ಎರಡನೇ ಪಟ್ಟಿಯನ್ನು ಶೀಘ್ರವೇ ಘೋಷಣೆ ಮಾಡುತ್ತೇವೆ ಎಂದು ಸಿಎಂ ಡಿ. ಕೆ. ಶಿವಕುಮಾರ್ ಭರವಸೆಯಿತ್ತರು. ಅವರು ಬರ ಪರಿಸ್ಥಿತಿ ಕುರಿತು ಸಿಎಂ ಡಿ.ಕೆ.ಶಿವಕುಮಾರ್ ಗದಗ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ ಅನ್ನದಾತನ ಅಳಲನ್ನು ಕೇಳಿದ್ದೇನೆ, ಕಣ್ಣಾರೆ ಬರದ ಛಾಯೇ ಕಂಡಿದ್ದೆನೆ ಎಂದ ಸಿಎಂ ಡಿಕೆಶಿಯವರು ರೈತರ ಕಷ್ಟಕ್ಕೆ ಸ್ಪಂದಿಸುವೆ ಎಂದರು. ಜಿಲ್ಲಾ ಸಚಿವರು ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ, ವಾಸ್ತವಾಂಶದ ವರದಿ ನೀಡಿದ್ದಾರೆ. ಅದರ ಜೊತೆಗೆ ಅಧಿಕಾರಿಗಳು ಅಧ್ಯಯನ ಮಾಡುತ್ತಿದ್ದಾರೆ. ಎರಡೂ ವರದಿ ಪರಿಶೀಲಿಸಿ ಕೇಂದ್ರಕ್ಕೆ ವರದಿ ಸಲ್ಲಿಸಬೇಕಿದೆ ಎಂದು ವಿವರಿಸಿದರು. ರೈತರ ಬದುಕು ಅಪಾಯದಲ್ಲಿದ್ದು ಜಿಲ್ಲೆಯ ಜನ ಆತಂಕಕ್ಕೆ ಒಳಗಾಗಿದ್ದಾರೆ. 50 ವರ್ಷಗಳಲ್ಲಿ ಇಂತಹ ಭೀಕರ ಬರ ಪರಿಸ್ಥಿತಿಯನ್ನು ಗದಗ ಜಿಲ್ಲೆ ಎದುರಿಸಿದೆ. ಈ ವರ್ಷ ಶೇ. 40 ರಷ್ಟು ಮಳೆ ಕಡಿಮೆಯಾಗಿದೆ. ನಾನು ಹೆಲಿಕಾಪ್ಟರ್ ನಲ್ಲಿ ಬರುವಾಗ ನೋಡಿದೆ. ಹಲವು ಕಡೆ ಬಿತ್ತನೆಯೇ ಆಗಿಲ್ಲ. ಬಿತ್ತನೆ ಆಗಿರುವ ಕಡೆಗಳಲ್ಲಿ 10-15% ಬೆಳೆ ಕೂಡಾ ರೈತರ ಕೈ ಸೇರುವುದಿಲ್ಲ ಎಂದರು. ರೈತರ ಜಮೀನಿಗೆ ಹೋಗಿ ಹತ್ತಿ, ಕಡಲೆಕಾಯಿ, ಜೋಳ, ಸೂರ್ಯಕಾಂತಿ ಬೆಳೆ ವೀಕ್ಷಣೆ ಮಾಡಿದ್ದೇನೆ. ರೈತರಿಗೆ ಯಾವ ಪ್ರಮಾಣದಲ್ಲಿ ತೊಂದರೆ ಆಗುತ್ತಿದೆ ಎಂದು ನನಗೆ ಮನವರಿಕೆ ಆಗಿದೆ. ರೈತರೊಂದಿಗೆ ಚರ್ಚೆ ಮಾಡಿದ್ದು, ಅವರ ನೋವು ಆಲಿಸಿದ್ದೆನೆ, ಜನ ವಲಸೆ ಹೋಗುವುದನ್ನು ತಪ್ಪಿಸಲು ವಿಬಿಜಿ ರಾಮ್ ಜಿ ಯೋಜನೆ ಹೇಗೆ ಸಹಾಯ ಆಗಬೇಕು ಎಂಬುದನ್ನು ಅರಿತು ಜಾರಿಗೆ ತರಲಾಗುವದು ಎಂದರು. ಈ ಜಿಲ್ಲೆಯಲ್ಲಿ ಗಜೇಂದ್ರಗಡ ಮಾತ್ರ ಬರ ಪೀಡಿತ ಎಂದು ಘೋಷಣೆ ಮಾಡಲಾಗಿದ್ದು, ಜಿಲ್ಲಾ ಮಂತ್ರಿಗಳ ನೇತೃತ್ವದಲ್ಲಿ ಎಲ್ಲಾ ಶಾಸಕರು, ಜಿಲ್ಲೆಯ ಎಲ್ಲಾ ತಾಲ್ಲೂಕುಗಳನ್ನು ಬರ ಪೀಡಿತವೆಂದು ಘೋಷಣೆ ಮಾಡಲು ಮನವಿ ಮಾಡಿದ್ದು ಅವರ ಮನವಿಗೆ ಸ್ಪಂದಿಸಲಾಗುವುದೆಂದರು. ಮಾಜಿ ಸಚಿವರು ಹಾಲಿ ಶಾಸಕ ಹೆಚ್. ಕೆ.ಪಾಟೀಲ ಅವರು ಮೋಡ ಬಿತ್ತನೆ ವಿಚಾರವಾಗಿ ತಮ್ಮ ಅಭಿಪ್ರಾಯ ಮಂಡಿಸಿದ್ದಾರೆ. ಅದೇ ರೀತಿ ಬೇರೆ ಶಾಸಕರು ಬೇರೆ ಬೇರೆ ವಿಚಾರವಾಗಿ ಗಮನ ಸೆಳೆದಿದ್ದಾರೆ. ನೀರಾವರಿ, ಬೆಣ್ಣೆಹಳ್ಳ ಸೇರಿದಂತೆ ಬೇರೆ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚಿಸಿದ್ದಾರೆ. ಆರ್ಥಿಕ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು ಈ ಯೋಜನೆಗಳ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು. ಕುಡಿಯುವ ನೀರಿನ ಪೂರೈಕೆ ಬಗ್ಗೆ ಸೂಚನೆ ನೀಡಲಾಗಿದೆ. ಕುಡಿಯುವ ನೀರಿಗೆ ಪ್ರತಿ ಗ್ರಾಮೀಣ ವಿಧಾನಸಭಾ ಕ್ಷೇತ್ರಕ್ಕೆ 1 ಕೋಟಿ ರೂ. ಅನುದಾನ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ ಹೆಚ್ಚುವರಿ ಹಣ ಇಡಲಾಗಿದೆ ಎಂದು ವಿವರಿಸಿದರು. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ಚುರುಕಾಗಬೇಕು, ಜನರು ತಮ್ಮ ಸಮಸ್ಯೆಗಳಿಗಾಗಿ ಅಲೆದಾಡುವುದನ್ನು ತಪ್ಪಿಸಲು ಪ್ರಜಾಸೇವಾ ಆಂದೋಲನ ಸೆ. 5ರಿಂದ ಆರಂಭಿಸಲಾಗುತ್ತಿದೆ ಎಂದರು. ಗ್ಯಾರಂಟಿ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ಸರಿಯಾದ ರೀತಿಯಲ್ಲಿ ತಲುಪಬೇಕು. ದುರ್ಬಳಕೆ ಆಗಬಾರದು. ಅದಕ್ಕಾಗಿ ಮರು ಪರಿಶೀಲನೆ ಹಾಗೂ ಪಂಚಾಯಿತಿಮಟ್ಟದ ಗ್ಯಾರಂಟಿ ಸಮಿತಿ ರಚಿಸುತ್ತಿದ್ದೇವೆ ಎಂದರು. ನಮ್ಮ ಸರ್ಕಾರ 100 ದಿನಗಳಲ್ಲಿ ಏನೆಲ್ಲಾ ಮಾಡಿದೆ, ಮುಂದೆ ಏನು ಮಾಡಲಿದೆ ಎಂಬ ವಿಚಾರವಾಗಿ ಅಧಿವೇಶನದಲ್ಲಿ ತಿಳಿಸಲು ನಿರ್ಧರಿಸಿದ್ದೆ. ಆದರೆ ಅದಕ್ಕೆ ವಿರೋಧ ಪಕ್ಷದವರು ಅವಕಾಶ ನೀಡಲಿಲ್ಲ. 100 ದಿನಗಳ ಕಾರ್ಯಕ್ರಮ ವೇಳೆ ನಾನು ಈ ವಿಚಾರವನ್ನು ತಿಳಿಸುತ್ತೇನೆ ಎಂದರು. ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಬಸವರಾಜ ರಾಯರಡ್ಡಿ, ಶಾಸಕರಾದ ಡಾ.ಎಚ್ಕೆ ಪಾಟೀಲ, ಸಿ.ಸಿ.ಪಾಟೀಲ, ಡಾ.ಚಂದ್ರು ಲಮಾಣಿ, ಪ್ರೊ.ಎಸ್.ವ್ಹಿ.ಸಂಕನೂರ, ಸೇರಿದಂತೆ ಹಿರಿಯ ಕಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
© ASK News Kannada. All Rights Reserved. Designed by AGScurate IT Solutions LLP