ಗದಗ, ಸೆ, 12 : ಜನತಾ ದರ್ಶನ ಕಾರ್ಯಕ್ರಮವು ಹೇಗೆ ಯಶಸ್ವಿ ಆಗಿದೆಯೋ ಅದೇ ರೀತಿ ಪ್ರಜಾ ಸೇವಾ ಅಭಿಯಾನವನ್ನೂ ಯಶಸ್ವಿಗೊಳಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕೆಂದು ಅಧಿಕಾರಿಗಳಿಗೆ ಮಾಜಿ ಸಚಿವರು, ಶಾಸಕ ಡಾ. ಎಚ್ಕೆ ಪಾಟೀಲರು ಹೇಳಿದರು ಕಡಕ್ ಸೂಚನೆ ನೀಡಿದರು. ಗದಗ ಬೇಟಗೇರಿಯ ಪಾಲಾ–ಬಾದಾಮಿ ರಸ್ತೆಯಲ್ಲಿರುವ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರ ಹಾಗೂ ತಾರಾಲಯ ಸಂಸ್ಥೆ ಆವರಣದಲ್ಲಿ ಪ್ರಜಾ ಸೇವಾ ಇಲಾಖೆಯ ವತಿಯಿಂದ *ಬಾಗಿಲಿಗೆ ಬಂತು ಸರ್ಕಾರ–ಸೇವೆಗೆ ಇರಲಿ ಸಹಕಾರ* ಆಶಯದಡಿ ಸೆ.12ರಂದು ಶನಿವಾರ ಆಯೋಜಿಸಿದ್ದ ಗದಗ–ಬೆಟಗೇರಿ ಹೋಬಳಿ ಮಟ್ಟದ *ಪ್ರಜಾ ಸೇವಾ ಅಭಿಯಾನ ಜನ ಸಂಪರ್ಕ ಸಭೆಯ* ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಅವರ ಬಳಿಗೆ ಹೋಗಿ ಆಲಿಸಿ ಅರ್ಜಿಗಳನ್ನು ಸ್ವೀಕರಿಸಿ ಸಂಬಂಧಿಸಿದ ಇಲಾಖೆಗಳ ಮೂಲಕ ಪರಿಹಾರ ಒದಗಿಸುವುದು ಪ್ರಜಾ ಸೇವಾ ಅಭಿಯಾನದ ಪ್ರಮುಖ ಉದ್ದೇಶವಾಗಿದೆ. ಸರ್ಕಾರದ ವಿವಿಧ ಯೋಜನೆಗಳು, ಸೌಲಭ್ಯಗಳು ಹಾಗೂ ಸೇವೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಅಧಿಕಾರಿಗಳು ಜನರೊಂದಿಗೆ ನೇರ ಸಂಪರ್ಕ ಹೊಂದಿ ಕಾರ್ಯನಿರ್ವಹಿಸಬೇಕು ಎಂದು ಶಾಸಕ ಡಾ. ಎಚ್.ಕೆ. ಪಾಟೀಲರು ಹೇಳಿದರು. ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರ ಪಡೆದುಕೊಳ್ಳಬೇಕು. ಯಾವುದೇ ಕಾರಣಕ್ಕೂ ಜನರು ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ಸಾರ್ವಜನಿಕರಿಂದ ಸ್ವೀಕರಿಸಲಾದ ಅರ್ಜಿಗಳ ವಾಸ್ತವಾಂಶ ಪರಿಶೀಲಿಸಿ, ನಿಯಮಾನುಸಾರ ಸಾಧ್ಯವಾದಷ್ಟು ತ್ವರಿತವಾಗಿ ವಿಲೇವಾರಿ ಮಾಡುವುದು ಅಧಿಕಾರಿಗಳ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು. ಪ್ರಜಾ ಸೇವಾ ಅಭಿಯಾನ ಜನ ಸಂಪರ್ಕ ಸಭೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ. ಕಾರ್ಯಕ್ರಮದಲ್ಲಿ ಮಧ್ಯಾಹ್ನ 12 ಗಂಟೆಯೊಳಗೆ 205 ಅರ್ಜಿಗಳು ಸ್ವೀಕೃತವಾಗಿದ್ದು, ನಂತರದ ಅವಧಿ ಸೇರಿದಂತೆ ಒಟ್ಟು 445 ಅರ್ಜಿಗಳು ಸ್ವೀಕೃತವಾಗಿವೆ. ಸಾರ್ವಜನಿಕರು ವಿವಿಧ ಸಮಸ್ಯೆಗಳಿಗೆ ಪರಿಹಾರ ಕೋರಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಈ ಪೈಕಿ 380 ಅರ್ಜಿಗಳು ಮನೆಗಳಿಗಾಗಿ ಸಲ್ಲಿಕೆಯಾಗಿರುವುದು ವಿಶೇಷವಾಗಿ ಗಮನಕ್ಕೆ ಬಂದಿದೆ. ಮನೆಗಳ ಅವಶ್ಯಕತೆ ಹೊಂದಿರುವ ಅರ್ಹ ಕುಟುಂಬಗಳಿಗೆ ಸರ್ಕಾರದ ವಿವಿಧ ವಸತಿ ಯೋಜನೆಗಳ ಮೂಲಕ ಸೌಲಭ್ಯ ಕಲ್ಪಿಸಲು ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಡಾ. ಎಚ್.ಕೆ. ಪಾಟೀಲರು ಸೂಚಿಸಿದರು. ಮನೆಗಳಿಗಾಗಿ ಸಲ್ಲಿಕೆಯಾಗಿರುವ 380 ಅರ್ಜಿಗಳನ್ನು ಅಧಿಕಾರಿಗಳು ಯಾವುದೇ ವಿಳಂಬವಿಲ್ಲದೆ ಪರಿಶೀಲಿಸಬೇಕು. ಅರ್ಜಿದಾರರ ಅರ್ಹತೆ, ದಾಖಲೆಗಳು ಹಾಗೂ ಸಂಬಂಧಿಸಿದ ಕಾನೂನು ಮತ್ತು ನಿಯಮಗಳನ್ನು ಪರಿಶೀಲಿಸಿ, ಅರ್ಹರಿಗೆ ಮೂರು ದಿನಗಳೊಳಗಾಗಿ ಕಾನೂನು ಬದ್ಧವಾಗಿ ಮನೆಗಳ ಹಕ್ಕುಪತ್ರ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು. ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಹಕ್ಕುಪತ್ರ ದೊರೆತರೆ ಅವರ ಬಹುದಿನಗಳ ಸಮಸ್ಯೆ ಪರಿಹಾರವಾಗಲಿದೆ. ಆದ್ದರಿಂದ ಅರ್ಜಿಗಳ ವಿಲೇವಾರಿಯಲ್ಲಿ ಅಧಿಕಾರಿಗಳು ವಿಶೇಷ ಗಮನಹರಿಸಬೇಕು. ಯಾವುದೇ ಕಾರಣಕ್ಕೂ ಅರ್ಹ ಫಲಾನುಭವಿಗಳು ಅನಗತ್ಯವಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವಂತಾಗಬಾರದು ಎಂದು ಹೇಳಿದರು. ಗದಗ ಜಿಲ್ಲೆಯಲ್ಲಿ ಮನೆಗಳಿಗಾಗಿ ಸಾರ್ವಜನಿಕರಿಂದ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಸಲ್ಲಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಲಾಗುವುದು. ಮನೆಗಳ ಹಕ್ಕುಪತ್ರ ಹಾಗೂ ವಸತಿ ಸಮಸ್ಯೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ, ಮುಂದಿನ ಕ್ರಮಗಳ ಕುರಿತು ಸಾರ್ವಜನಿಕರಿಗೆ ಪತ್ರದ ಮೂಲಕ ಮಾಹಿತಿ ನೀಡಲಾಗುವುದು ಎಂದು ಶಾಸಕ ಡಾ. ಎಚ್.ಕೆ. ಪಾಟೀಲ ಭರವಸೆ ನೀಡಿದರು. *ಜನತಾ ದರ್ಶನ ಮಾದರಿಯಲ್ಲಿ ಕಾರ್ಯನಿರ್ವಹಿಸಲು ಕರೆ..* ಗದಗ ಜಿಲ್ಲೆಯಲ್ಲಿ ಈಗಾಗಲೇ ನಾಲ್ಕು ಬಾರಿ ಜನತಾ ದರ್ಶನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ. ಈ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದ್ದು, ಒಟ್ಟು 2,987ಕ್ಕೂ ಹೆಚ್ಚು ಅರ್ಜಿಗಳು ಸ್ವೀಕೃತವಾಗಿವೆ. ಅವುಗಳಲ್ಲಿ ಬಹುತೇಕ ಅರ್ಜಿಗಳನ್ನು ಸಂಬಂಧಿಸಿದ ಇಲಾಖೆಗಳ ಮೂಲಕ ವಿಲೇವಾರಿ ಮಾಡಲಾಗಿದ್ದು, ಸದ್ಯ 147 ಅರ್ಜಿಗಳು ಮಾತ್ರ ಬಾಕಿ ಉಳಿದಿವೆ ಎಂದು ಅವರು ತಿಳಿಸಿದರು. ಜನತಾ ದರ್ಶನದ ಮೂಲಕ ಸಾರ್ವಜನಿಕರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಅವುಗಳಿಗೆ ಪರಿಹಾರ ಒದಗಿಸುವ ವ್ಯವಸ್ಥೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಿದೆ. ಇದೇ ಮಾದರಿಯಲ್ಲಿ ಪ್ರಜಾ ಸೇವಾ ಅಭಿಯಾನವನ್ನೂ ಯಶಸ್ವಿಗೊಳಿಸಬೇಕು. ಪ್ರತಿಯೊಂದು ಅರ್ಜಿಯನ್ನೂ ಗಂಭೀರವಾಗಿ ಪರಿಗಣಿಸಿ, ಅರ್ಜಿದಾರರಿಗೆ ಸೂಕ್ತ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಡಾ. ಎಚ್.ಕೆ. ಪಾಟೀಲ ಹೇಳಿದರು. ಪ್ರಜಾ ಸೇವಾ ಅಭಿಯಾನವು ಕೇವಲ ಅರ್ಜಿಗಳನ್ನು ಸ್ವೀಕರಿಸುವ ಕಾರ್ಯಕ್ರಮವಾಗಬಾರದು. ಸ್ವೀಕರಿಸಿದ ಅರ್ಜಿಗಳ ವಿಲೇವಾರಿ, ಅರ್ಜಿದಾರರಿಗೆ ಮಾಹಿತಿ ನೀಡುವುದು ಹಾಗೂ ಸರ್ಕಾರದ ಸೇವೆಗಳು ಅರ್ಹ ಫಲಾನುಭವಿಗಳಿಗೆ ತಲುಪುವವರೆಗೆ ನಿರಂತರ ಮೇಲ್ವಿಚಾರಣೆ ನಡೆಸಬೇಕು. ಈ ಮೂಲಕ ಸಾರ್ವಜನಿಕರಲ್ಲಿ ಸರ್ಕಾರದ ಸೇವೆಗಳ ಕುರಿತು ವಿಶ್ವಾಸ ಮತ್ತಷ್ಟು ಹೆಚ್ಚಿಸಬೇಕು ಎಂದರು. *ಬಾಗಿಲಿಗೆ ಬಂತು ಸರ್ಕಾರ–ಸೇವೆಗೆ ಇರಲಿ ಸಹಕಾರ* ಎಂಬ ಆಶಯದಂತೆ ಸರ್ಕಾರದ ಸೇವೆಗಳು ಜನರ ಮನೆ ಬಾಗಿಲಿಗೆ ತಲುಪಬೇಕು. ಜನರೂ ಸಹ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ, ಸರ್ಕಾರದ ವಿವಿಧ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು. ಅಧಿಕಾರಿಗಳು ಮತ್ತು ಸಾರ್ವಜನಿಕರ ಸಹಕಾರದಿಂದ ಮಾತ್ರ ಪ್ರಜಾ ಸೇವಾ ಅಭಿಯಾನ ಯಶಸ್ವಿಯಾಗಲು ಸಾಧ್ಯ ಎಂದು ಶಾಸಕರು ಹೇಳಿದರು. ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ್ ಬಬರ್ಚಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಎಚ್.ಎನ್., ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಸಿ.ಆರ್. ಮುಂಡರಗಿ, ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
© ASK News Kannada. All Rights Reserved. Designed by AGScurate IT Solutions LLP